

ಗಂಗಾವತಿ: ಆಶಾ ಕಾರ್ಯಕರ್ತೆಯರ ಸೇವೆ ಕಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ವರ್ಷಗಳಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತಿದ್ದು, ಸಂಘಟಿತವಾಗಿ ಹಕ್ಕುಗಳನ್ನು ಪಡೆಯಬೇಕಿದೆ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಹೇಳಿದರು.
ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮತ್ತು ಎಐಯುಟಿಯುಸಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಗರ ಮಟ್ಟದ ಆಶಾ ಕಾರ್ಯಕರ್ತೆಯರ ಮೊದಲ ಸಮ್ಮೇಳನದಲ್ಲಿ ಮಾತನಾಡಿದರು.
ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕರ್ತವ್ಯ ನಿರ್ವಹಿಸುವ ಆಶಾಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸೇವೆ ಕಾಯಂ ಮರೀಚಿಕೆಯಾಗಿದೆ. 15 ವರ್ಷಗಳಿಂದ ದುಡಿಯುತ್ತಿದ್ದರೂ ಶ್ರಮಕ್ಕೆ ತಕ್ಕ ಪ್ರತಿಲ ದೊರೆಯುತ್ತಿಲ್ಲ. ಕಾರ್ಮಿಕ ಸ್ಥಾನ, ಕನಿಷ್ಠ ವೇತನವೂ ನಿಗದಿಯಾಗಿಲ್ಲ. ಹೋರಾಟಕ್ಕೆ ಬೆಲೆ ದೊರೆಯಬೇಕಾದರೆ ಸಂಘಟನೆ ಬಲಿಷ್ಟಗೊಳ್ಳಬೇಕಿದೆ ಎಂದರು.
ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಕೌಶಲ್ಯಾ, ಗ್ರಾಮೀಣ ಘಟಕದ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ, ಸದಸ್ಯೆ ಸುನೀತಾ ಇತರರಿದ್ದರು.
ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ವಿಜಯಲಕ್ಷ್ಮೀ ಆಚಾರ್ (ಅಧ್ಯಕ್ಷೆ), ಲಾಲಬೀ, ಅನ್ನಪೂರ್ಣಾ, ರಜೀಯಾಬೇಗಂ, ಚಂಪಾ, ಆಫ್ರೀನ್, ದಾಕ್ಷಾಯಣಿ, ರಾಜೇಶ್ವರಿ, ಅಮರಮ್ಮ (ಉಪಾಧ್ಯಕ್ಷರು), ಶಿವಮ್ಮ ಯಲಬುರ್ಗಾ (ಕಾರ್ಯದರ್ಶಿ), ಶರಣಮ್ಮ, ಮೀನಾಕ್ಷಿ, ರೇಖಾ, ರಾಧಾ, ಖುರ್ಷಿದಾಭಾನು, ಸಂಗೀತಾ, ಲಲಿತಾ, ಸುಮಾ, ಅಫ್ರೀನಾ, ಈರಮ್ಮ, ಸರೋಜಾಬಾಯಿ, ಜಯಶ್ರೀ, ಸವಿತಾ, ಸಮೀರಾ, ಭಾನು, ಹನುಮಕ್ಕ, ಪ್ರೇಮಾ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.