

ಗಂಗಾವತಿ: ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗುವುದರಿಂದ ಉತ್ತಮ ಮನಸ್ಸು ಮತ್ತು ದೇಹ ಹೊಂದಲು ಸಾಧ್ಯವಿದ್ದು, ಅನಗತ್ಯ ಒತ್ತಡ ದೂರ ಮಾಡಬಹುದಾಗಿದೆ ಎಂದು ಗ್ರಾಮೀಣ ಪಿಐ ಎನ್.ಮಂಜುನಾಥ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಪೊಲೀಸ್ ಕ್ರಿಕೆಟ್ ತಂಡದಿಂದ ಭಾನುವಾರ ಆಯೋಜಿಸಿದ್ದ ನೌಕರರ ಕ್ರಿಕೆಟ್ ಹಬ್ಬ ಉದ್ಘಾಟಿಸಿ ಮಾತನಾಡಿದರು. ಒತ್ತಡ ಬದುಕಿನಲ್ಲಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದು, ಸಮುದಾಯವನ್ನೂ ದೂರ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಯಾವುದೇ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಆತ್ಮೀಯತೆ ಹೆಚ್ಚಾಗುವುದರ ಜತೆಗೆ ಬಾಂಧವ್ಯ ವೃದ್ಧಿಯಾಗಲಿದೆ. ಆರೋಗ್ಯ ರಕ್ಷಣೆಗೆ ಕ್ರೀಡಾ ಚಟುವಟಿಕೆ ಪೂರಕವಾಗಿದ್ದು, ಸೌಹಾರ್ದತೆಯಿಂದ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಮಾತನಾಡಿ, ವೃತ್ತಿಪರರಿಗಾಗಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ ಎಂದರು.
ಮೂರು ದಿನಗಳ ಪಂದ್ಯಾದಲ್ಲಿ ಪತ್ರಿಕಾ ತಂಡ ಸೇರಿ ವಿವಿಧ ಇಲಾಖೆಯ 14 ತಂಡಗಳು ಭಾಗವಹಿಸಿವೆ. ಮೊದಲ ದಿನದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರೆಸ್ ಕ್ರಿಕೆಟ್ ಕ್ಲಬ್ (ಪಿಸಿಸಿ) 91 ರನ್‌ಗಳೊಂದಿಗೆ ಅತ್ಯಧಿಕ ರನ್ ಗಳಿಸಿದ ತಂಡಕ್ಕೆ ಪಾತ್ರವಾಯಿತು.
ಸಂಚಾರಿ ಪಿಎಸೈ ಶಾರದಮ್ಮ, ನಗರ ಪಿಎಸೈ ಕಾಮಣ್ಣ, ನೌಕರರ ಸಂಘದ ತಾಲೂಕು ಅಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕು ದೈಹಿಕ ಪರಿವೀಕ್ಷಕ ಕೆ.ರಂಗಸ್ವಾಮಿ ನಾಯಕ, ಪಿಡಿಒ ಬಸವರಾಜಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಇಂಗಳಗಿ ನಾಗರಾಜ್, ಉದ್ಯಮಿ ದೀಪಕ್ ಬಾಂಠಿಯಾ ಇತರರಿದ್ದರು.