

ಗಂಗಾವತಿ: ನಗರದ ಪ್ರಮುಖ ರಸ್ತೆಗಳ ದುರಸ್ತಿ ಒತ್ತಾಯಿಸಿ ಸಮಾನ ಮನಸ್ಕರ ತಂಡ ರಸ್ತೆಯಲ್ಲಿನ ಗುಂಡಿಗಳ ಮುಂದೆ ದೀಪ ಹಚ್ಚುವ ಮೂಲಕ ಭಾನುವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ರಸ್ತೆ ದುರಸ್ತಿ ಸೇರಿ ನಗರದ ಮೂಲ ಸೌಕರ್ಯಕ್ಕಾಗಿ ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್ ನೇತೃತ್ವದ ಸಮಾನ ಮನಸ್ಕರ ತಂಡ ಲಯನ್ಸ್ ಕ್ಲಬ್ ಭವನದಲ್ಲಿ ಸಭೆಯಲ್ಲಿ ರಸ್ತೆಗಳ ಶಾಶ್ವತ ದುರಸ್ತಿ, ಸಿಟಿ ಮಾರುಕಟ್ಟೆ ಸ್ಥಳಾಂತರ, ಕುಡಿವ ನೀರು ಮತ್ತು ಬೀಡಾಡಿ ದನಗಳ ಹಾವಳಿ ನಿವಾರಣೆ ಕುರಿತು ಚರ್ಚಿಸಲಾಯಿತು.
ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನಸೆಳೆಯಲು ರಸ್ತೆಯಲ್ಲಿನ ಗುಂಡಿಗಳ ಮುಂದೆ ದೀಪ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದರು. ವಿನೂತನ ರೀತಿಯ ಪ್ರತಿಭಟನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಾದಚಾರಿಗಳು ದೀಪ ಹಚ್ಚುವ ಮೂಲಕ ಬೆಂಬಲಿಸಿದರು.
ಡಾ.ಶಿವಕುಮಾರ ಮಾಲಿ ಪಾಟೀಲ್‌ಮಾತನಾಡಿ, ನಗರದ ಎಲ್ಲ ರಸ್ತೆಗಳು ಹಾಳಾಗಿದ್ದು, ಅಪಘಾತ ಪ್ರಮಾಣ ಹೆಚ್ಚುತ್ತಿವೆ. ವಾಹನಗಳು ಜಖಂಗೊಳ್ಳುತ್ತಿದ್ದು, ಜೀವ ಭಯದಿಂದ ಸಂಚರಿಸುವ ಸ್ಥಿತಿ ಬಂದಿದೆ. ಪ್ರತಿಭಟನೆ ಸಾಂಕೇತಿಕವಾಗಿದ್ದು, ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಪ್ರಮುಖರಾದ ಚನ್ನಬಸವ ಜೇಕಿನ್, ಎ.ಪಿ.ಅರ್ಜುನ್, ಸಿ.ಮಹಾಲಕ್ಷ್ಮೀ, ಬಸವರಾಜ ಮ್ಯಾಗಳಮನಿ, ಪ್ರಲ್ಹಾದ ಕುಲ್ಕರ್ಣಿ, ಟಿ.ಆಂಜನೇಯ, ಸಂದೇಶ ಹಿರೇಮಠ ಇತರರಿದ್ದರು.