ಭತ್ತದ ಇಳುವರಿ ಖೋತಾ

rice yield decline
ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿನ ಭತ್ತದ ಬೆಳೆ ಸಂಪೂರ್ಣ ನೆಲಕ್ಕೊರಗಿರುವುದು.
Published on

ಗಂಗಾವತಿ: ಹವಾಮಾನ ವೈಪರಿತ್ಯ ರೈತರ ನೆಮ್ಮದಿ ಕಸಿದುಕೊಂಡಿದ್ದು, ಭತ್ತದ ಹಿಂಗಾರಿನ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಮಳೆರಾಯನ ಅಬ್ಬರ ನಿರಾಶೆಗೊಳಿಸಿದೆ.

ಗಂಗಾವತಿ ಸೇರಿ ತಾಲೂಕಿನ ಮರಳಿ, ಹೇರೂರು, ಕೇಸರಹಟ್ಟಿ, ಆನೆಗೊಂದಿ, ಮಲ್ಲಾಪುರ, ಢಣಾಪುರ, ಹೆಬ್ಬಾಳ, ಆಯೋಧ್ಯಾ, ಶ್ರೀರಾಮನಗರ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ 36ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ ಮತ್ತು ಬೋರ್‌ವೆಲ್ ಆಶ್ರಿತ ಪ್ರದೇಶದಲ್ಲಿ ಸೋನಾ ಮಸೂರಿ, ಐಆರ್64, ಕಾವೇರಿ ಸೋನಾ, ಆರ್‌ಎನ್‌ಆರ್ ತಳಿಗಳಿಗೆ ಆದ್ಯತೆ ನೀಡಿದ್ದು, ಶೇ.40 ಪ್ರಮಾಣ ಕೊಯ್ಲಗಿದ್ದು, ತೇವಾಂಶ ಪ್ರಮಾಣಕ್ಕೆ ಎಪಿಎಂಸಿ ಮತ್ತು ರಸ್ತೆ ಬದಿಯಲ್ಲಿ ಒಣಗಲು ಹಾಕಲಾಗಿದೆ. ವಾರದೊಳಗೆ ನವೆಂಬರ್ ಮೊದಲ ವಾರದಲ್ಲಿ ಶೇ.60 ಭತ್ತದ ಬೆಳೆ ಕೊಯ್ಲುಗೆ ಬರಬೇಕಿತ್ತಾದರೂ ಹವಾಮಾನ ವೈಪರಿತ್ಯದಿಂದ ಸಂಪೂರ್ಣ ನೆಲ ಕಚ್ಚಿದೆ. ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ ಎಂಬ ಮಾತು ರೈತರಿಗಾಗಿದೆ.

ನಿರೀಕ್ಷೆ ಹುಸಿ: ಈ ಬಾರಿ ಉತ್ತಮ ಬೆಳೆ ಬಂದಿದ್ದು, ರೋಗ ಪ್ರಮಾಣವು ಕಡಿಮೆಯಾಗಿತ್ತು. ಕನಕಗಿರಿ ಭಾಗದಲ್ಲಿ ಕಳಪೆ ಬೀಜ ಪೂರೈಕೆ ಹೊರತುಪಡಿಸಿದರೆ ಶೇ.95 ಬೆಳೆ ಉತ್ತಮ ಸ್ಥಿತಿಯಲ್ಲಿತ್ತು. ಬೆಲೆಯಲ್ಲೂ ಚೇತರಿಕೆ ಕಂಡಿದ್ದು, ರೈತರ ಮನೆ ಬಾಗಲಿಗೆ ಖರೀದಿಸುವ ವಹಿವಾಟುಗಾರರ ತಂಡವಿತ್ತು. ಆದರೆ ಹವಾಮಾನ ವೈಪರಿತ್ಯ ರೈತರ ನಿರೀಕ್ಷೆ ಹುಸಿ ಮಾಡಿದ್ದು, ನೆಲಕ್ಕೊರಗಿರುವ ಭತ್ತದ ಗದ್ದೆಯಲ್ಲಿನ ಪೈರುಗಳು ಮೊಳಕೆಯೊಡೆಯುತ್ತಿವೆ. ಬೆಳೆ ಎತ್ತಿ ಕಟ್ಟಿದರೆ ಕೂಲಿಕಾರರು ಸಿಗಲ್ಲ, ಸಿಕ್ಕರೆ ದುಬಾರಿ ಕೂಲಿ ನೀಡಬೇಕು. ಬಿಟ್ಟರೇ ಇಳುವರಿ ಹಾಳಾಗಲಿದೆ. ಸಂಕಷ್ಟದಲ್ಲಿ ರೈತರಿದ್ದು, ಹಿಂಗಾರು ಭತ್ತದ ಬೆಳೆ ಕೈಬಿಟ್ಟಂತಾಗಿದೆ. ಪರಿಸ್ಥಿತಿ ಅರಿತ ಖರೀದಿದಾರರು ವಹಿವಾಟಿನಿಂದ ಹಿಂದೆ ಸರಿಯುತ್ತಿದ್ದು, ಶೇ.14 ತೇವಾಂಶ ಪ್ರಮಾಣ ಹೊಂದಿಸುವುದು ರೈತರಿಗಾಗುತ್ತಿಲ್ಲ.

ದರ ಇಳಿಕೆ ಆತಂಕ: ಉತ್ತಮ ಇಳುವರಿ ಹಿನ್ನೆಲೆಯಲ್ಲಿ ಆರಂಭದಲ್ಲಿ ಭತ್ತಕ್ಕೆ ಕ್ವಿಂಟಾಲ್‌ಗೆ ಸರಾಸರಿ 2000ರೂ.ಗಳಿಂದ 2100ರೂ.ವರೆಗೆ ನಿಗದಿಯಾಗಿದ್ದು, ಖರೀದಿದಾರರ ಮೇಲೆ ಅವಲಂಬಿತವಾಗಿತ್ತು. ಬೆಳೆ ಹಾನಿಯಿಂದಾಗಿ ಬೆಲೆಯಲ್ಲೂ ಕುಸಿತಗೊಂಡಿದ್ದು, 24 ಗಂಟೆಯಲ್ಲಿ ಸರಾಸರಿ 250ರೂ.ಗಳಿಂದ 300ರೂ.ವರೆಗೆ ಇಳಿಕೆಯಾಗಿದೆ. 1650ರೂ.ಗಳಿಂದ 1700ರೂ.ವರೆಗೆ ನಿಗದಿಯಾಗಿದ್ದು, ಸೋನಾಮಸೂರಿ 1800ರೂ.ಗೆ ಕೊಟ್ಟರೂ ಕೊಳ್ಳುವರಿಲ್ಲದಂತಾಗಿದೆ. ಐಆರ್64 1500ರಿಂದ 1600ರೂ.ವರೆಗೆ ಬಂದಿದ್ದು, ಖರೀದಿದಾರರ ಕೃತಕ ಆಭಾವ ಸೃಷ್ಟಿಯನ್ನೂ ಅಲ್ಲಗೆಳೆಯುವಂತಿಲ್ಲ. ಸಿಬಿಎಸ್ ಪ್ರಾಂಗಣದಲ್ಲಿ ಒಣಗಲು ಹಾಕಿರುವ ಭತ್ತಕ್ಕೂ ಮಳೆ ಬಾಧೆ ಆವರಿಸಿದ್ದು, ನೀರಿನಲ್ಲಿ ತೊಯ್ದುರಿಂದ ಮುಗ್ಗಾಗಿ, ಕಪ್ಪು ಬಣ್ಣಕ್ಕೆ ತಿರುಗಿದೆ.

ಕೃಷಿ ವೆಚ್ಚ ದೊರೆಯುವುದು ಅನುಮಾನ: ತುಂಗಭದ್ರಾ ಜಲಾಶಯದ ಗೇಟ್ ಬದಲಾವಣೆ ಹಿನ್ನೆಲೆಯಲ್ಲಿ ಎರಡನೇ ಬೆಳೆ ಅನುಮಾನ ಎನ್ನುತ್ತಿದ್ದರೂ, ಉತ್ತಮ ಮಳೆಯಿಂದ ಹಿಂಗಾರು ಬೆಳೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಕೀಟಬಾಧೆಯ ಕಾಟವೂ ಇರಲಿಲ್ಲ. ಹವಾಮಾನ ವೈಪರಿತ್ಯ ರೈತರ ದೀಪಾವಳಿ ಸಂಭ್ರಮ ಕಸಿದುಕೊಂಡಿದ್ದು, ಕೃಷಿ ವೆಚ್ಚ ಬರುವುದು ಅನುಮಾನ. ಗಂಗಾವತಿ, ವೆಂಕಟಗಿರಿ, ಮರಳಿ ಹೋಬವಳಿ ವ್ಯಾಪ್ತಿಯ ಬಹುತೇಕ ಭತ್ತದ ಗದ್ದೆಗಳಲ್ಲಿ ಇದೇ ಸ್ಥಿತಿ ಬಂದಿದ್ದು, ಸಮೀಕ್ಷೆಯಿಂದ ಹಾನಿ ಪ್ರಮಾಣ ಗುರುತಿಸಬೇಕಿದೆ. ಅಳಿದುಳಿದ ಬೆಳೆ ಖರೀದಿಸಲು ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕಿದ್ದು, ಷರತ್ತುಗಳನ್ನು ಸಡಿಲಿಸಿದರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ.

ಹವಾಮಾನ ವೈಪರಿತ್ಯದಿಂದ ಹಾಳಾಗಿರುವ ಭತ್ತದ ಗದ್ದೆಯಲ್ಲಿ ಬೆಳೆ ಮಾಹಿತಿ ಸಮಗ್ರ ವರದಿ ನೀಡುವಂತೆ ತಾಲೂಕಾಡಳಿತಕ್ಕೆ ಸೂಚಿಸಿದ್ದು, ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು.

ಗಾಲಿ ಜನಾರ್ದನರೆಡ್ಡಿ, ಶಾಸಕ, ಗಂಗಾವತಿ

ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ತಂಡ ಶೀಘ್ರವೇ ಬೆಳೆ ಹಾನಿ ಬಗ್ಗೆ ವರದಿ ನೀಡಲಿದ್ದು, ಜಿಲ್ಲಾಡಳಿತದ ಗಮನಕ್ಕೆ ಸಲ್ಲಿಸಲಾಗುವುದು. ಹವಾಮಾನ ವೈಪರಿತ್ಯದಿಂದ ಭತ್ತದ ಬೆಳೆಗೆ ಹಾನಿಯಾಗಿದೆ.

ಯು.ನಾಗರಾಜ್

ತಹಸೀಲ್ದಾರ್, ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net