

ಗಂಗಾವತಿ: ತಾಲೂಕಿನ ಚಿಕ್ಕರಾಂಪುರ ಮತ್ತು ಲಕ್ಷ್ಮೀಪುರವನ್ನು ಅರಣ್ಯ ಇಲಾಖೆ ಮೀಸಲು ಅರಣ್ಯ ಪ್ರದೇಶವೆಂದು ೋಷಿಸಿದ್ದು, ಈ ಅಧಿಸೂಚನೆ ಹಿಂಪಡೆಯುವಂತೆ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ತಾಲೂಕಾಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸುನೀಲ್ ಕುಲ್ಕರ್ಣಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳ್‌ಮನಿ ಮಾತನಾಡಿ, 50ವರ್ಷಗಳಿಂದ ವಸತಿ ಮತ್ತು ಬೇಸಾಯ ಪ್ರದೇಶವಾಗಿರುವ ಚಿಕ್ಕರಾಂಪುರ ಮತ್ತು ಲಕ್ಷ್ಮೀಪುರವನ್ನು ಮೀಸಲು ಅರಣ್ಯ ಪ್ರದೇಶವೆಂದು ೋಷಿಸಿರುವುದು ಖಂಡನೀಯ. ಇದರಿಂದ ಬದುಕು ಕಟ್ಟಿಕೊಂಡ 169 ಕುಟುಂಬಗಳಿಗೆ ಅನ್ಯಾಯವಾಗಲಿದೆ. ರಾಜ್ಯದ ಮೀಸಲು ಅರಣ್ಯ ಪ್ರದೇಶವನ್ನು ಪ್ರಭಾವಿ ಕಾರ್ಖಾನೆಗಳು ಒತ್ತುವರಿ ಮಾಡಿಕೊಂಡಿದ್ದು, ಇಂತವರಿಂದ ಭೂಮಿ ವಶಪಡಿಸಿಕೊಳ್ಳುವ ಬದಲು ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ.
192.85 ಹೆಕ್ಟೇರ್ ಪ್ರದೇಶ ಮೀಸಲು ಅರಣ್ಯವೆಂಬ ನೆಪದಲ್ಲಿ ತೊಂದರೆ ಕೊಡುತ್ತಿರುವುದು ಅಲ್ಲಿನ ನಿವಾಸಿಗಳಿಗೆ ಮರಣ ಶಾಸನವಾಗಿದೆ. ಉದ್ದೇಶಿತ ಗ್ರಾಮಗಳಲ್ಲಿ ಸರ್ಕಾರದಿಂದ ಹಲವು ಅಭಿವೃದ್ಧಿ ಕಾಮಗಾರಿಗಳಾಗಿದ್ದು, ಅನುದಾನ ಬಳಕೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಂಭೀರ ಪರಿಗಣಿಸಿ, ಅರಣ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆ ಹಿಂಪಡೆಯುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ಮಂಜುನಾಥ್ ಚನ್ನಾದಾಸರ್, ಭೋಗೇಶ್ ಆನೆಗುಂದಿ, ಮೇಘರಾಜ್, ಕೆ.ಎಂ. ಅರವಿಂದ್, ಮಂಜುನಾಥ್ ಹಿರೇಮಠ್ ಇತರರಿದ್ದರು. ಚಿಕ್ಕರಾಂಪುರಕ್ಕೆ ತೆರವಿನ ತೂಗುಕತ್ತಿ ಕುರಿತು ವಿಜಯವಾಣಿಯಲ್ಲಿ ಅ.22ರಂದು ವಿಸ್ತೃತ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುಸು.