ರಾಮಾಯಣದಲ್ಲಿವೆ ಜೀವನ ಮೌಲ್ಯಗಳು

gangavathi chintana-manthana
ಗಂಗಾವತಿ ಐಎಂಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಮಾಯಣ ಚಿಂತನ-ಮಂಥನ ಕಾರ್ಯಕ್ರಮವನ್ನು ಜ್ಞಾನ ಮಂದಿರದ ಮುಖ್ಯಸ್ಥ ಮತ್ತು ಅಧ್ಯಾತ್ಮ ಪ್ರವಚನಕಾರ ಪಂ.ಬೇವಿನಾಳ್ ಪ್ರಹ್ಲಾದಾಚಾರ್ ಸೋಮವಾರ ಉದ್ಘಾಟಿಸಿದರು. ಉಪನ್ಯಾಸಕಿ ಲಲಿತಾ ಕಂದಗಲ್, ಸದ್ಭಾವನಾ ಸಂಸ್ಥೆ ಅಧ್ಯಕ್ಷ ಸುಬ್ರಮಣ್ಯರಾಯ್ಕರ್ ಇತರರಿದ್ದರು.
Published on

ಪ್ರವಚನಕಾರ ಬೇವಿನಾಳ್ ಪ್ರಹ್ಲಾದಾಚಾರ್ ಅಭಿಮತ

ಗಂಗಾವತಿ: ಜೀವನ ಮತ್ತು ಕುಟುಂಬ ನಿರ್ವಹಣೆಯ ಮೌಲ್ಯಗಳು ರಾಮಾಯಣದಲ್ಲಿದ್ದು, ಹೇಗೆ ಬದುಕಬೇಕೆಂಬುದನ್ನು ಕಲಿಸಿಕೊಟ್ಟಿದೆ ಎಂದು ಜ್ಞಾನ ಮಂದಿರದ ಮುಖ್ಯಸ್ಥ ಮತ್ತು ಅಧ್ಯಾತ್ಮ ಪ್ರವಚನಕಾರ ಪಂ.ಬೇವಿನಾಳ್ ಪ್ರಹ್ಲಾದಾಚಾರ್ ಹೇಳಿದರು.

ನಗರದ ಐಎಂಎ ಸಭಾಂಗಣದಲ್ಲಿ ಸದ್ಭಾವನಾ ಸೇವಾ ಸಂಸ್ಥೆ ಮತ್ತು ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ಸೋಮವಾರ ಹಮ್ಮಿಕೊಂಡಿದ್ದ ರಾಮಾಯಣ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಮಾಯಣದಲ್ಲಿ ಉದಾತ್ತ ಜೀವನ ನಡೆಸಲು ಬೇಕಾದ ಎಲ್ಲ ಮೌಲ್ಯಗಳಿದ್ದು, ಮಾತೃತ್ವ, ಪಿತೃತ್ವ, ಭ್ರಾತೃತ್ವ ಮತ್ತು ಪತ್ನಿತ್ವದ ಕರ್ತವ್ಯಗಳನ್ನು ಮನದಟ್ಟಾಗುವಂತೆ ತಿಳಿಸಲಾಗಿದೆ. ಮೌಲ್ಯಗಳನ್ನು ಎತ್ತಿಹಿಡಿದ ರಾಮ, ಎಲ್ಲ ಸಂಬಂಧಗಳಿಗೂ ಅರ್ಥ ಕಲ್ಪಿಸಿಕೊಂಡ ಮರ್ಯಾದಾ ಪುರುಷೋತ್ತಮ. ಆದರ್ಶದಿಂದ ಬದುಕಿದ ಶ್ರೀರಾಮಚಂದ್ರ ಮೌಲ್ಯಗಳು ಸರ್ವಕಾಲಿಕ ಮಾನ್ಯತೆ ಪಡೆದಿವೆ ಎಂದರು.

ಬಾಲಕರ ಸ.ಪ.ಪೂ. ಕಾಲೇಜು ಉಪನ್ಯಾಸಕಿ ಲಲಿತಾ ಕಂದಗಲ್ ಮಾತನಾಡಿ, ತಾಯಿ ಮತ್ತು ಮಕ್ಕಳ ಬಾಂಧವ್ಯವನ್ನು ರಾಮಾಯಣದಿಂದ ತಿಳಿದುಕೊಳ್ಳಲು ಸಾಕಷ್ಟಿದ್ದು, ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕ ಎಂದರು.

ಕಾರ್ಯಕ್ರಮದ ಉದ್ದೇಶ ಕುರಿತು ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಪವನಕುಮಾರ ಗುಂಡೂರು ಪ್ರಾಸ್ತಾವಿಕ ಮಾತನಾಡಿದರು. ಸದ್ಭಾವನಾ ಸಂಸ್ಥೆಯಿಂದ ಆಯೋಜಿಸುವ ರಾಮಾಯಣ ಪರೀಕ್ಷೆಗೆ 80ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಹೆಸರು ನೋಂದಾಯಿಸಿದ್ದು, 80 ವರ್ಷದ ಹನುಮಾಕ್ಷಮ್ಮ ಎಂಬುವರು ಅತ್ಯಂತ ಹಿರಿಯ ಪರೀಕ್ಷಾರ್ಥಿಗಳಾಗಿದ್ದಾರೆ.

ಸದ್ಭಾವನಾ ಸಂಸ್ಥೆ ಅಧ್ಯಕ್ಷ ಸುಬ್ರಮಣ್ಯರಾಯ್ಕರ್, ಹಿರಿಯ ವೈದ್ಯ ಡಾ.ಶಿವಾನಂದ ಬಾವಿಕಟ್ಟಿ, ಉದ್ಯಮಿ ಕೆಲೋಜಿ ಶ್ರೀನಿವಾಸ ಶ್ರೇಷ್ಠಿ, ನಿವೃತ್ತ ಪಿಡಿಒ ರವೀಂದ್ರ ಹೂಲಗೇರಿ, ಕಸಾಪ ತಾಲೂಕು ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಸಂಸ್ಥೆ ಸದಸ್ಯರಾದ ಶಾಂತಾ ಸುಬ್ರಮಣ್ಯರಾಯ್ಕರ್, ಗಾಯತ್ರಿ ವೆರ್ಣೇಕರ್, ಅಂಬಕ್ಕ ಕಡೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net