ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಕಡ್ಡಾಯ; ಗಂಗಾವತಿ ನಗರ ಠಾಣೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ

29082022 Gangavati ganesh festive
Published on

ಗಂಗಾವತಿ: ಗಣೇಶೋತ್ಸವ ನಿಮಿತ್ತ ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪನೆಗೆ ತಾಲೂಕಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ನಗರ ಠಾಣೆಯಲ್ಲಿ ವಿವಿಧ ಇಲಾಖೆ ಪ್ರತಿನಿಧಿಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ.

ಕೋವಿಡ್ ಕಾರಣ ಕಳೆದ ಎರಡು ವರ್ಷ ಗಣೇಶ ಹಬ್ಬದ ಕಳೆಯಿರಲಿಲ್ಲ, ಪ್ರತಿಷ್ಠಾಪನೆ ಸಮಿತಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಪರವಾನಗಿ ಕಡ್ಡಾಯಗೊಳಿಸಿದ್ದು, ನಗರಸಭೆ, ಪೊಲೀಸ್, ಅಗ್ನಿಶಾಮಕ, ಜೆಸ್ಕಾಂ ಮತ್ತು ಗ್ರಾಮೀಣ ಭಾಗದಲ್ಲಿ ಗ್ರಾಪಂಯಿಂದ ಅನುಮತಿ ಪಡೆಯಬೇಕಿದೆ. ಪ್ರತಿಷ್ಠಾಪನೆ ಸಮಿತಿಗೆ ಅನುಕೂಲವಾಗಲಿ ಎಂದು ಎಲ್ಲ ಇಲಾಖೆ ಆಧಿಕಾರಿಗಳನ್ನು ಒಳಗೊಂಡ ತಂಡ ನಗರ ಠಾಣೆಯಲ್ಲಿ ಬೀಡು ಬಿಟ್ಟಿದ್ದು, ಸಮಿತಿ ಸದಸ್ಯರ ಮೊಬೈಲ್ ಸಂಖ್ಯೆ ಸೇರಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದೆ. ನಿಗದಿತ ಅರ್ಜಿ ನಮೂನೆಯಲ್ಲಿ ಎಲ್ಲ ವಿವರ ತುಂಬಿ, ವಿದ್ಯುತ್ ಬಳಕೆ ಶುಲ್ಕವನ್ನು ಜೆಸ್ಕಾಂ ಇಲಾಖೆಗೆ ಭರಿಸಿದ ನಂತರವೇ ಪರವಾನಗಿ ನೀಡಲಾಗುತ್ತಿದೆ. ಈವರೆಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ 70ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಮಾತನಾಡಿ, ಗಣೇಶ ಉತ್ಸವ ಸಮಿತಿಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಿರ್ಲಕ್ಷಿಸಿದರೆ ಸಮಿತಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪರವಾನಗಿ ಪಡೆದರೆ ಇಲಾಖೆ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net