

ಗಂಗಾವತಿ: ದೇಶದ ಪ್ರಗತಿಗೆ ಅಡ್ಡಿಯಾಗಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಎಸ್‌ಬಿಐ ಮುಖ್ಯಶಾಖೆ ವ್ಯವಸ್ಥಾಪಕ ಬ್ರಹ್ಮದೇವಸಿಂಗ್ ಹೇಳಿದರು.
ನಗರದ ಎಸ್‌ಬಿಐ ಮುಖ್ಯಶಾಖೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿರ್ಮೂಲನೆ ಅರಿವು ಸಪ್ತಾಹದಲ್ಲಿ ಮಾತನಾಡಿದರು. ನಿರಂತರ ಸೇವೆ ಹಾಗೂ ಪ್ರಾಮಾಣಿಕತೆಗೆ ಕಂಟಕವಾಗಿರುವ ಭ್ರಷ್ಟಾಚಾರ ಸಮಾಜಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಪ್ರತಿಯೊಬ್ಬರು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ಭ್ರಷ್ಟಾಚಾರ ನಿಯಂತ್ರಣ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಅಧಿಕಾರಿಗಳಾದ ಟಿ.ಶ್ರೀನಿವಾಸ, ರಮೇಶ, ರಾಮಾಂಜನೇಯಲು, ನಿವೃತ್ತ ವ್ಯವಸ್ಥಾಪಕ ಕಿಶನ್ ರಾವ್, ಸಿಬ್ಬಂದಿ ಇತರರಿದ್ದರು.