

ಗಂಗಾವತಿ: ದೇಹ ಮತ್ತು ಮನಸ್ಸು ನಿಯಂತ್ರಿಸುವ ಕರಾಟೆ ಕಲೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು, ಕಲಿಕೆಗೆ ವಿದ್ಯಾರ್ಥಿಗಳು ಆಸಕ್ತಿವಹಿಸುವಂತೆ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಬಸವರಾಜ್ ಹೇಳಿದರು.
ನಗರದ ಕಸಾಪ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಆತ್ಮಸ್ಥೈರ್ಯ ಹೆಚ್ಚಿಸುವ ಕರಾಟೆ ಕಲಿಕೆ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯಗೊಳಿಸಿದ್ದು, ಏಕಾಗ್ರತೆ ಹೆಚ್ಚಿಸಲಿದೆ. ಪಾಠದ ಜತೆಗೆ ಆಟೋಟಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯರಾಗಬೇಕು. ಕ್ರೀಡಾ ಸಾಧಕರಿಗೆ ಎಲ್ಲ ಕ್ಷೇತ್ರದಲ್ಲೂ ಮೀಸಲು ದೊರೆಯಲಿದೆ ಎಂದರು.
ಕರಾಟೆ ತರಬೇತುದಾರ ಅನ್ವರ್‌ಸಾಬ್ ಮಾತನಾಡಿ, ಸರ್ಕಾರ ಪ್ರೋತ್ಸಾಹಿಸಿದರೆ ಕರಾಟೆ ಕಲೆ ಇನ್ನಷ್ಟು ವಿಸ್ತರಿಸಲು ಸಾಧ್ಯವಿದ್ದು, ಎಲ್ಲ ಶಾಲೆಗಳಲ್ಲಿ ತರಬೇತುದಾರರನ್ನು ನಿಯೋಜಿಸಬೇಕಿದೆ ಎಂದರು. ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.
ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ರಾಚಯ್ಯಸ್ವಾಮಿ, ಕರಾಟೆ ತರಬೇತುದಾರರಾದ ಎಸ್.ವಿ.ಮೌನೇಶ, ಕಲ್ಯಾಣಕುಮಾರ, ಸೈಯದ್ ಬಿಲಾಲ್, ಎಚ್.ಡಿ.ಬಂಗಾಳಿ, ಲಿಂಗರಾಜ್, ಎಂ.ಆರ್. ಸಾವಿತ್ರಿ, ರಾಜಶೇಖರ್, ಪವಿತ್ರಾ ಇತರರಿದ್ದರು. ನ್ಯೂ ಬ್ರೈಟ್ ಕರಾಟೆ ಸ್ಪೋಟ್ಸ್ ಅಕಾಡೆಮಿ, ಜವಾನ್ ಕರಾಟೆ ಅಸೋಸಿಯೇಷನ್ ಹಾಗೂ ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.