184ಲಕ್ಷ ರೂ.ರಸ್ತೆ ಕಾಮಗಾರಿಗೆ ನಿಗದಿ

Gangavati rural Road repair
ಗಂಗಾವತಿ ತಾಲೂಕಿನ ಭಟ್ಟರನರಸಾಪುರದಲ್ಲಿ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಸಂಸದ ಕರಡಿ ಸಂಗಣ್ಣ ಭೂಮಿ ಪೂಜೆ ನೆರವೇರಿಸಿದರು. ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಜಿ.ವೀರಪ್ಪ ಕೇಸರಹಟ್ಟಿ ಇದ್ದರು.
Published on

ಗಂಗಾವತಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕನಸಿನಂತೆ ಗ್ರಾಮಾಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ತಾಲೂಕಿನ ಭಟ್ಟರನರಸಾಪುರದಲ್ಲಿ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅರಳಹಳ್ಳಿಯಿಂದ ಭಟ್ಟರನರಸಾಪುರದವರೆಗಿನ 2.97ಕಿ.ಮೀ.ರಸ್ತೆಯನ್ನು 184ಲಕ್ಷ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಮೂಲ ಸೌಲಭ್ಯ ಒದಗಿಸಲಾಗಿದ್ದು, ರೈಲ್ವೆ ಯೋಜನೆ ಸಾಕಾರಗೊಳಿಸಲಾಗಿದೆ.

ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದ್ದು, ವಿವಿಧ ಯೋಜನೆ ಅನುಷ್ಟಾನಗೊಳಿಸಲಾಗಿದೆ ಎಂದರು.

ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಗುಣಮಟ್ಟದ ಕಾಮಗಾರಿಯೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.

ನಂತರ ಗ್ರಾಮದ ದ್ಯಾಮವ್ವದೇವಿ,ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರೊಂದಿಗೆ ಸೌಲಭ್ಯದ ಬಗ್ಗೆ ಚರ್ಚಿಸಿದರು.

ಮಾಜಿ ಶಾಸಕ ಜಿ.ವೀರಪ್ಪ ಕೇಸರಹಟ್ಟಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವನಗೌಡ ಪೊ.ಪಾಟೀಲ್, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ, ಗುತ್ತಿಗೆದಾರ ಜಿ.ಹರಿಬಾಬು ಇದ್ದರು.

ತರಾತುರಿಯಲ್ಲಿ ಭೂಮಿ ಪೂಜೆ

ತರಾತುರಿಯಲ್ಲಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಸಂಸದ ಕರಡಿ ಸಂಗಣ್ಣ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಹರಿಹಾಯ್ದರು.

ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದರೂ, ಸ್ಥಳೀಯ ಬಿಜೆಪಿ ಮುಖಂಡರ ಗಮನಕ್ಕೆ ಬಾರದಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕಾಮಗಾರಿ ನಡೆದರೂ, ಕೇಂದ್ರದ ಅನುದಾನ ಸಿಂಹಪಾಲು ಎಂದು ಬಿಜೆಪಿ ಮುಖಂಡರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net