

ಗಂಗಾವತಿ: ಪಹಲ್ಗಾಮ್ ನರಮೇಧ ಪ್ರಕರಣದ ಪ್ರತೀಕಾರ ತೀರಿಸಿಕೊಂಡ ದೇಶದ ಸೈನಿಕರು, ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಆಪರೇಷನ್ ಸಿಂಧೂರ ಯಶಸ್ವಿ ಹಿನ್ನೆಲೆಯಲ್ಲಿ ನಗರದ ಶ್ರೀ ಚನ್ನಬಸವ ಸ್ವಾಮಿ ಮಠದಲ್ಲಿ ಬಿಜೆಪಿ ವಿವಿಧ ಮೋರ್ಚಾದಿಂದ ವಿಶೇಷ ಪೂಜೆ ಮತ್ತು ಶ್ರೀ ಚನ್ನಬಸವಸ್ವಾಮಿ ಬೆಳ್ಳಿ ರಥೋತ್ಸವ ಗುರುವಾರ ನೆರವೇರಿಸಿ ಮಾತನಾಡಿದರು.
ಉಗ್ರರ ಅಟ್ಟಹಾಸ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬಿಗಿ ನಿಲುವು ತಾಳಿದ್ದು, ಪ್ರಧಾನಿ ನರೇಂದ್ರ ಮೋದಿ ಸೇನಾಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸುವ ಮೂಲಕ ಪಾಕಿಸ್ತಾನದ ವಿರುದ್ಧ ಯುದ್ಧ ಮೊಳಗಿಸಿದ್ದಾರೆ. ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಸೇನೆಗೆ ಬಲ ನೀಡಬೇಕಿದೆ ಎಂದರು.
ಮಾಜಿ ಸಂಸದ ಎಸ್.ಶಿವರಾಮನಗೌಡ ಮಾತನಾಡಿ, ಕೇಂದ್ರ ಸರ್ಕಾರದ ನಿಲುವುನ್ನು ಪ್ರತಿಯೊಬ್ಬರೂ ಬಲಪಡಿಸಬೇಕಿದ್ದು, ಉಗ್ರರ ಶಾಶ್ವತ ಶಮನಕ್ಕೆ ಉತ್ತಮ ಸಮಯ ಎಂದರು.
ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ವಾಸುದೇವ ನವಲಿ, ಪರಶುರಾಮ್ ಮಡ್ಡೇರ್, ಬಿಜೆಪಿ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಕಾಶೀನಾಥ ಚಿತ್ರಗಾರ, ಶ್ರೀನಿವಾಸ ಧೂಳಾ, ಎಚ್.ಸಂಗಮೇಶ, ರೇಖಾ ರಾಯಭಾಗಿ, ಹುಲಿಗೆಮ್ಮನಾಯಕ, ಶಕುಂತಲಾ ವೈ.ಕಲ್ಲೂರ್, ಕೆ.ವೆಂಕಟೇಶ, ನರಸಿಂಗರಾವ್ ಕುಲ್ಕರ್ಣಿ, ಶಿವು ಆದೋನಿ ಇತರರಿದ್ದರು.