

ಗಂಗಾವತಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಬೇಡಿಕೆಗಳ ಈಡೇರಿಕೆಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಬೇಕೆಂದು ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಶಾಸಕ ಜಿ.ಜನಾರ್ದನ ರೆಡ್ಡಿ ನಿವಾಸಕ್ಕೆ ತೆರಳಿ ಶನಿವಾರ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ವಿವಿಧ ಇಲಾಖೆ, ವಸತಿ ನಿಲಯ, ಹಾಸ್ಟೆಲ್ಗಳಲ್ಲಿ ಅಡುಗೆ ಸಹಾಯಕರು, ಸ್ವಚ್ಛತೆಗಾರರು, ಕಾವಲುಗಾರರು, ಡಿ ಗ್ರ್ೂ ಅಟೆಂಡರ್, ಕಂಪ್ಯೂಟರ್‌ಆಪರೇಟರ್, ಪ್ರಥಮ ದರ್ಜೆ ಸಹಾಯಕರು, ಗುತ್ತಿಗೆದಾರರು, ವಾರ್ಡನ್ ಸೇರಿ ಇತರ ಅಧಿಕಾರಿಗಳು 20 ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಹಲವು ಬಾರಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಂಘಟನೆ ಸದಸ್ಯರೆಲ್ಲರೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.18ರಂದು ಬೆಳಗಾವಿ ಸುವರ್ಣಸೌಧದ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಕ್ಷೇತ್ರದ ಶಾಸಕರಾದ ತಾವು, ಅಧಿವೇಶನದಲ್ಲಿ ಹೊರಗುತ್ತಿಗೆ ನೌಕರರ ಬೇಡಿಕೆಗಳಾದ ನೇರ ವೇತನ, ನಿವೃತ್ತಿವರೆಗೆ ಸೇವಾ ಭದ್ರತೆ, ಕನಿಷ್ಠ 31 ಸಾವಿರ ವೇತನ, ವಾರದ ರಜೆ, ಕೆಲಸದ ಸಮಯ ನಿಗದಿ, ನೇಮಕಾತಿ ಆದೇಶ ಪತ್ರ, ಐಡಿ ಕಾರ್ಡ್, ನಿವೃತ್ತಿ ನಂತರ ಜೀವನ ನಿರ್ವಹಣೆಗೆ 10 ಲಕ್ಷ ಪರಿಹಾರ, ಸುರಕ್ಷತಾ ಸಲಕರಣೆ, ಹಾಸ್ಟೆಲ್‌ಗಳಿಗೆ ಕಾವಲುಗಾರರ ನೇಮಕ, ಅಡುಗೆಗೆ ಗುಣಮಟ್ಟದ ಸಾಮಗ್ರಿ ನೀಡುವುದು ಸೇರಿ ಇತರ ಬೇಡಿಕೆಗಳ ಕುರಿತು ಚರ್ಚಿಸುವಂತೆ ಮನವಿ ಮಾಡಿದರು. ಸಂಘದ ಸದಸ್ಯರಾದ ಫಕೀರಪ್ಪ, ಮಹಮದ್ ರಫೀಕ್, ಪಾರ್ವತಿ, ಆನಂದ, ನೂರ್‌ಪಾಷಾ, ಪೀರ್‌ಸಾಬ್, ರಾಧಾ, ರೇಖಾ, ಬಾಲೇಶ ಇತರರಿದ್ದರು.