

ಗಂಗಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಕಸಾಪ ಮತ್ತು ಕರವೇ ಸಂಘಟನೆಗಳು ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಪೊಲೀಸರು ಅಡ್ಡಿ ಪಡಿಸಿದ್ದು, ಖಾಕಿ ಪಡೆ ವಿರೋಧದ ನಡುವೆಯೂ ಸಂಪ್ರದಾಯದಂತೆ ಮಂಗಳವಾರ ರ‌್ಯಾಲಿ ನಡೆಸಲಾಯಿತು.
ಸಮ್ಮೇಳನ ಸಂದರ್ಭದಲ್ಲಿ ಪ್ರಚಾರ ಮತ್ತು ಜಾಗೃತಿಗಾಗಿ ಬೈಕ್ ರ‌್ಯಾಲಿ ನಡೆಸುವುದು ವಾಡಿಕೆಯಾಗಿದ್ದು, ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ರಂಜಾನ್ ಹಬ್ಬದ ನೆಪದಲ್ಲಿ ಬೈಕ್ ರ‌್ಯಾಲಿಗೆ ಅನುಮತಿ ನೀಡದ ಪೊಲೀಸರು, ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗಿತ್ತು. ರ‌್ಯಾಲಿ ನಡೆಸದಂತೆ ಪಟ್ಟು ಹಿಡಿದಿದ್ದ ಪಿಐ ಪ್ರಕಾಶ ಮಾಳೆ ಅನುಮತಿ ನೀಡಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಗಾಲಿ ಜನಾರ್ದನರೆಡ್ಡಿ ಮೂಲಕ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಕೆಲಷರತ್ತುಗಳನ್ವಯ ಪೊಲೀಸರು ಒಪ್ಪಿಕೊಂಡರೂ ಕಸಾಪ ಪದಾಧಿಕಾರಿಗಳು ಹಿಂದಕ್ಕೆ ಸರಿದರು. ಕನ್ನಡಪರ ವಿಚಾರದಲ್ಲಿ ಪೊಲೀಸರು ನಡೆದುಕೊಂಡ ರೀತಿಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಯಿತು.
ಕೊನೆಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಜ್ಯೂನಿಯರ್ ಕಾಲೇಜು ಮೈದಾನದಿಂದ ನಗರಾದ್ಯಂತ ಬೈಕ್ ರ‌್ಯಾಲಿ ನಡೆಸಿದರು. ಮಾ.27 ಮತ್ತು 28ರಂದು ನಡೆವ ಕನ್ನಡ ಹಬ್ಬಕ್ಕೆ ಪ್ರತಿಯೊಬ್ಬರು ಸಾಕ್ಷಿಯಾಗುವಂತೆ ಮನವಿ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಕೋಶಾಧ್ಯಕ್ಷ ರಮೇಶ ಕುಲ್ಕರ್ಣಿ, ಕರವೇ ಪದಾಧಿಕಾರಿಗಳಾದ ಪಂಪಣ್ಣನಾಯಕ, ಚನ್ನಬಸವ ಜೇಕಿನ್, ಬಳ್ಳಾರಿ ರಾಮಣ್ಣ ನಾಯಕ, ಎಂ.ಡಿ.ಅಲಿ, ಮನೋಹರಗೌಡ ಹೇರೂರು, ವಿರೂಪಾಕ್ಷಗೌಡ ನಾಯಕ, ರಾಜೇಶ ರೆಡ್ಡಿ, ಆಂಜನೇಯ, ಯಮನೂರಭಟ್ ಇತರರಿದ್ದರು.