

ಗಂಗಾವತಿ: ಮಕ್ಕಳ ಬೌದ್ಧಿಕ ಮತ್ತು ಮಾನಸಿಕತೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆರೈಕೆದಾರರು ಹಾಕಿಕೊಳ್ಳಬೇಕಿದ್ದು, ಮಾದರಿ ಕೇಂದ್ರಗಳಾಗಲಿ ಎಂದು ತಾಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಹೇಳಿದರು.
ನಗರದ ತಾಪಂ ಸಾಮಾರ್ಥ್ಯಸೌಧದಲ್ಲಿ ಪಂಚಾಯತ್‌ರಾಜ್ ಇಲಾಖೆ ಕನಕಗಿರಿ ತಾಲೂಕಿನ ಕೂಸಿನ ಮನೆಯ ಮಕ್ಕಳ ಆರೈಕೆದಾರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ 2ನೇ ಹಂತದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಆರೋಗ್ಯ ರಕ್ಷಣೆ ಜವಾಬ್ದಾರಿ ಆರೈಕೆದಾರರ ಮೇಲಿದ್ದು, ಏಳು ದಿನ ನಡೆಯುವ ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದರು.
ಕೂಸಿನ ಮನೆ ಯೋಜನೆ ಸಂಪನ್ಮೂಲ ವ್ಯಕ್ತಿ ವಿದ್ಯಾವತಿ ಮಾತನಾಡಿ, ತರಬೇತಿ ಕಾರ್ಯಾಗಾರದ ಮೂಲಕ ಜವಾಬ್ದಾರಿ ನೀಡಲಾಗುತ್ತಿದ್ದು, ಮನೆ ಮಕ್ಕಳಂತೆ ಆರೈಕೆ ಮಾಡಬೇಕಿದೆ. ನಿರ್ಲಕ್ಷ್ಯವಹಿಸದೆ, ಮಕ್ಕಳಿಗೆ ಮನೆ ವಾತಾವರಣ ನಿರ್ಮಿಸುವಂತೆ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಈರಮ್ಮ, ವಿಷಯ ನಿರ್ವಾಹಕರಾದ ದೇವರಾಜ್, ಶೇಖರಪ್ಪ, ಶಿವಮೂರ್ತಿ ಕಂಪಾಪುರಮಠ, ಪವನಕುಮಾರ, ಕನಕಗಿರಿ ತಾಲೂಕು ಐಇಸಿ ಸಂಯೋಜಕ ಕೆ.ಶಿವಕುಮಾರ್ ಇತರರಿದ್ದರು.