

ಗಂಗಾವತಿ: ಸ್ಥಳೀಯ ಅಲೆಮಾರಿಗಳ ಜೀವನ ಸ್ಥಿತಿಗತಿ ಮತ್ತು ಸೌಲಭ್ಯ ಕೊರತೆಗಳ ಬಗ್ಗೆ ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಡಿಸಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ನಗರದ 31ನೇ ವಾರ್ಡ್‌ನಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯಗಳ ಕಾಲನಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ಜೀವನ ಸ್ಥಿತಿಗತಿ ಪರಿಶೀಲನೆಗೆ ಖುದ್ದಾಗಿ ಭೇಟಿ ನೀಡಿದ್ದು, ನಿವಾಸಿಗಳ ಸಮಸ್ಯೆ ಆಲಿಸಲಾಗಿದೆ. ಸೌಲಭ್ಯ ಕೊರತೆಯಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೌಕರ್ಯಗಳ ಕೊರತೆ ವರದಿಯನ್ನು ಡಿಸಿ ಸಭೆಯಲ್ಲಿ ಪ್ರಸ್ತಾಪಿಸಲಾಗುತ್ತಿದ್ದು, ಸೌಲಭ್ಯ ಒದಗಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದರು.
ಪರಿಶೀಲನೆ: ಅಲೆಮಾರಿಗಳ ಟೆಂಟ್‌ಗಳಿಗೆ ತೆರಳಿದ ಅಧ್ಯಕ್ಷೆ ನೇತೃತ್ವದ ಅಧಿಕಾರಿಗಳ ತಂಡ, ಜೀವನ ವ್ಯವಸ್ಥೆ ಪರಿಶೀಲಿಸಿತು. ಕಾಲನಿಯಲ್ಲಿ ಸ್ವಚ್ಛತೆಯಿಲ್ಲದಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪರನ್ನು ತರಾಟೆಗೆ ತೆಗೆದುಕೊಂಡರು. ಚರಂಡಿ ಸ್ವಚ್ಛತೆಗೆ ಆದ್ಯತೆ, ಆನಾರೋಗ್ಯಕ್ಕೆ ತುತ್ತಾಗದಂತೆ ಗಮನಹರಿಸಿ ಎಂದರು. ಅಡುಗೆ ಕೋಣೆ, ಮಲಗುವ ಸ್ಥಳ, ಮಹಿಳೆಯರ ದೈನಂದಿನ ಬದುಕಿನ ಸ್ಥಿತಿಗತಿ, ಮಕ್ಕಳ ಶಿಕ್ಷಣ, ನಿವೇಶನ, ಹಕ್ಕುಪತ್ರದ ಬಗ್ಗೆ ಮಾಹಿತಿ ಪಡೆದುಕೊಂಡರು. ನಿವೇಶನ ಮತ್ತು ಮನೆ ಕಟ್ಟಿಸಿಕೊಡಿ ಎಂದು ಸ್ಥಳೀಯರು ಮನವಿ ಮಾಡಿದರು. 125 ಕುಟುಂಬಗಳಿದ್ದು, ಇನ್ನೂ 25 ಕುಟುಂಬ ಪಟ್ಟಿಯಲ್ಲಿಲ್ಲ. ಎಲ್ಲ ವರದಿ ಸಿದ್ಧಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಮನವಿ ಸಲ್ಲಿಕೆ: ಕಾಲನಿಯ ಕೂಗಮ್ಮ ದೇವಾಲಯ ಬಳಿ ಸಮುದಾಯದ ಮುಖಂಡರೊಂದಿಗೆ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ಮೂಲ ಸೌಲಭ್ಯ ಒದಗಿಸುವಂತೆ ಬುಡ್ಗಜಂಗಮ, ಸಿಂಧೋಳೋ, ಶಿಳ್ಳೆಕ್ಯಾತೆ, ಚನ್ನದಾಸರ ಸಮುದಾಯದವರು ಮನವಿ ಸಲ್ಲಿಸಿದರು. ಮನೆ, ನಿವೇಶನ, ಶೌಚಗೃಹ, ರುದ್ರಭೂಮಿ ಇತರ ಸೌಲಭ್ಯ ಕೊರತೆ ಬಗ್ಗೆ ಅಲೆಮಾರಿ ಸಮುದಾಯದ ಮುಖಂಡರಾದ ನಾಗಪ್ಪ, ವೆಂಕಟೇಶ, ಕೃಷ್ಣ ಮಾತನಾಡಿದರು. ಶಿರಸ್ತೇದಾರ್ ರವಿಕುಮಾರ ನಾಯಕವಾಡಿ, ಆರ್‌ಐ ಸೈಯದ್ ಬಶೀರುದ್ದೀನ್, ವಿಎ ಚನ್ನಬಸಪ್ಪ, ವಿಷಯ ನಿರ್ವಾಹಕ ಬಿಲಾಲ್ ಬಾಷಾ ಇತರರಿದ್ದರು.
ಅಸಂಮಜಸ ಉತ್ತರಕ್ಕೆ ಗರಂ
ಅಲೆಮಾರಿ ಸಮುದಾಯದ ಮಕ್ಕಳ ಶಿಕ್ಷಣ ಸ್ಥಿತಿಗತಿ ಬಗ್ಗೆ ಸಮರ್ಪಕ ಉತ್ತರ ನೀಡುವಲ್ಲಿ ವಿಲರಾದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂಗಪ್ಪ ಬಗ್ಗೆ ಅಧ್ಯಕ್ಷೆ ಗರಂ ಆಗಿದ್ದು, ಜನರ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡರು. ಮಕ್ಕಳು ಶಾಲೆಗೆ ಹೋಗುವುದು, ವಸತಿ ಶಾಲೆಗಳಲ್ಲಿ ಪ್ರವೇಶದ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು. ಹಾರಿಕೆ ಉತ್ತರ ನೀಡಲೆತ್ನಿಸಿದಾಗ ಅಸಮಾಧಾನಗೊಂಡು, ನಿರ್ಲಕ್ಷ್ಯತನದಿಂದ ಕೆಲಸ ಮಾಡಬೇಡಿ ಎಂದರು.