

ಗಂಗಾವತಿ: ಅಲೆಮಾರಿ ಸಮುದಾಯಕ್ಕೆ ಶೇ.1 ಮೀಸಲಾತಿ ದೊರಕಿಸಲು ಒತ್ತಾಯಿಸಿ ಮುಖ್ಯ ಅಂಚೆ ಕಚೇರಿಯಲ್ಲಿ ಸೋಮವಾರ ಅಲೆಮಾರಿ ಹೋರಾಟ ಸಮಿತಿ ಕೇಂದ್ರ ವಿಪಕ್ಷ ನಾಯಕ ರಾಹುಲ್‌ಗಾಂಧಿಗೆ ಪತ್ರ ರವಾನಿಸುವ ಮೂಲಕ ಪತ್ರ ಚಳವಳಿ ನಡೆಸಿದರು.
ಸಮಿತಿ ತಾಲೂಕಾಧ್ಯಕ್ಷ ಆರ್. ಕೃಷ್ಣ ಮಾತನಾಡಿ, ಒಳ ಮೀಸಲು ಕಾಯ್ದೆ ಜಾರಿ ಸಂದರ್ಭದಲ್ಲಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ. ನ್ಯಾಯಯುತವಾಗಿ ಬರಬೇಕಾದ ಶೇ.1 ಮೀಸಲು ಸಮುದಾಯಕ್ಕೆ ಮರೀಚಿಕೆಯಾಗಿದೆ. ಕನಿಷ್ಠ ಸೌಲಭ್ಯಗಳಿಲ್ಲದೇ 79 ವರ್ಷಗಳಿಂದಲೂ ಬೀದಿ ಬದಿಯಲ್ಲಿ ವಾಸಿಸುವ ಸ್ಥಿತಿ ಸಮುದಾಯಕ್ಕಿದೆ. ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದ್ದು, ಅ.2ರಂದು ದಿಲ್ಲಿ ಚಲೋ ಹಮ್ಮಿಕೊಳ್ಳಲಾಗಿದೆ.
ಕೇಂದ್ರದ ವಿಪಕ್ಷ ನಾಯಕ ರಾಹುಲ್‌ಗಾಂಧಿ ಮಧ್ಯ ಪ್ರವೇಶಿಸಿ, ರಾಜ್ಯ ಸರ್ಕಾರಕ್ಕೆ ಶೇ.1 ಮೀಸಲು ನೀಡಲು ಶಿಾರಸು ಮಾಡಬೇಕು. ರಾಜ್ಯಾದ್ಯಂತ 5 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಪದಾಧಿಕಾರಿಗಳಾದ ಅಶ್ವರಾಮಣ್ಣ, ಕೆ.ನಾಗರಾಜ್, ಕುಮಾರ, ವೆಂಕಟೇಶ, ಬಂಗಾರಪ್ಪ, ಸಿಂಧೋಳ್ ಯಲ್ಲಪ್ಪ, ಮಂಜುನಾಥ ಚನ್ನದಾಸರ್, ವಿ.ನಾಗರಾಜ್, ದಲಿತ ಪರ ಸಂಘಟನೆ ಪದಾಧಿಕಾರಿಗಳಾದ ಸಿ.ಕೆ.ಮರಿಸ್ವಾಮಿ, ರೇಣುಕಮ್ಮ ಇತರರಿದ್ದರು.