ನದಿ ಸೇರುತ್ತಿದೆ ಕಾರ್ಖಾನೆಗಳ ವಿಷ

gvt-1
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನದ ವಿಶೇಷ ಸಭೆಯಲ್ಲಿ ಸಮೀಕ್ಷಾ ವರದಿ ಬಿಡುಗಡೆಗೊಳಿಸಲಾಯಿತು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ, ಟ್ರಸ್ಟ್ ಅಧ್ಯಕ್ಷ ಪ್ರೊ.ಕುಮಾರಸ್ವಾಮಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಡಾ. ಶಿವಕುಮಾರ ಮಾಲಿ ಪಾಟೀಲ, ಸಂತೋಷ ಕೆಲೋಜಿ, ಜಗನ್ನಾಥ ಆಲಂಪಲ್ಲಿ, ಡಾ.ಎ.ಸೋಮರಾಜು ಇತರರಿದ್ದರು.
Published on

ಗಂಗಾವತಿ: ಕಲುಷಿತಗೊಂಡ ತುಂಗಭದ್ರಾ ನದಿ ಸ್ವಚ್ಛತೆ ಜಾಗೃತಿಗಾಗಿ ಮೂರನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ಕಿಷ್ಕಿಂಧಾದಿಂದ ಮಂತ್ರಾಲಯವರಗೆ ಸಾಗಲಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ ಹೇಳಿದರು.

ನಗರದ ಐಎಂಎ ಸಭಾಂಗಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಮತ್ತು ಪರ್ಯಾವರಣ ಟ್ರಸ್ಟ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಭಿಯಾನದ ಸಮೀಕ್ಷಾ ವರದಿ ಬಿಡುಗಡೆ ವಿಶೇಷ ಸಭೆಯಲ್ಲಿ ಮಾತನಾಡಿದರು. ತುಂಗಭದ್ರಾ ನದಿ ನೀರು ಕಲುಷಿತಗೊಳ್ಳುತ್ತಿದ್ದು, ಅಲ್ಯುಮಿನಿಯಂ ಪ್ರಮಾಣ ಹೆಚ್ಚಾಗುತ್ತಿದೆ.

ಸ್ವಚ್ಛತೆಗೆ ಮುಂದಾಗದಿದ್ದರೆ 2040ರ ಹೊತ್ತಿಗೆ ನದಿ ನೀರು ಕುಡಿಯಲು ಯೋಗ್ಯವಾಗಿರಲ್ಲ. ಇನ್ನು ನದಿ ತೀರದಲ್ಲಿರುವ ಗ್ರಾಮಗಳ ತ್ಯಾಜ್ಯವೆಲ್ಲ ನದಿಗೆ ಸೇರುತ್ತಿದ್ದು, ಕಾರ್ಖಾನೆಗಳ ವಿಷಕಾರಿ ವಸ್ತುಗಳು ನದಿಗೆ ಬರುತ್ತಿವೆ.

ನದಿ ಸ್ವಚ್ಛತೆಗಾಗಿ ಶೃಂಗೇರಿಯಿಂದ ಕಿಷ್ಕಿಂಧಾವರೆಗೆ ಹಮ್ಮಿಕೊಂಡ ಜಲ ಮತ್ತು ಜನ ಜಾಗೃತಿ ಯಾತ್ರೆಗೆ ಉತ್ತಮ ಸ್ಪಂದನೆ ದೊರೆತಿದೆ. ಮೊದಲ ಹಂತದಲ್ಲಿ ಶೃಂಗೇರಿ-ಹರಿಹರ, ಎರಡನೇ ಹಂತದಲ್ಲಿ ಹರಿಹರ-ಕಿಷ್ಕಿಂಧಾವರೆಗೆ ಜಾಗೃತಿ ಯಾತ್ರೆ ಮಾಡಲಾಗಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಪ್ರೊ.ಕುಮಾರಸ್ವಾಮಿ ಮಾತನಾಡಿ, ಎರಡು ಹಂತಗಳ ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಏಳು ಜಿಲ್ಲೆ, 13 ತಾಲೂಕು, 120 ಗ್ರಾಮಗಳ ಮೂಲಕ 430 ಕಿ.ಮೀ. ಪಾದಯಾತ್ರೆ ನಡೆಸಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ, 150 ಶಾಲಾ-ಕಾಲೇಜುಗಳು, 250 ಪರಿಸರ ಕಾಳಜಿ ಸಂಸ್ಥೆಗಳು ಮತ್ತು 30 ಧಾರ್ಮಿಕ ಮಠಗಳು ಬೆಂಬಲಿಸಿವೆ ಎಂದರು.

ವಿವಿಧ ಸಂಘಟನೆ ಪದಾಧಿಕಾರಿಗಳಾದ ಸಿ.ಪಿ ಮಾಧವನ್, ಎಂ.ಶಂಕರ, ಡಾ. ಶಿವಕುಮಾರ ಮಾಲಿಪಾಟೀಲ, ಸಂತೋಷ ಕೆಲೋಜಿ, ಜಗನ್ನಾಥ ಆಲಂಪಲ್ಲಿ, ಡಾ.ಎ.ಸೋಮರಾಜು, ಹಾಸ್ಯ ಭಾಷಣಕಾರ ಬಿ.ಪ್ರಾಣೇಶ, ರುದ್ರೇಶ ಆರಾಳ, ಕೆ.ಚನ್ನಬಸಯ್ಯಸ್ವಾಮಿ, ರಾಘವೇಂದ್ರ ತೂನಾ, ಬಾಲಕೃಷ್ಣನಾಯ್ಡು, ಮಂಜುನಾಥ ಗುಡ್ಲಾನೂರ, ಅರ್ಜುನ್, ಮಂಜುನಾಥ ಕಟ್ಟಿಮನಿ, ಪವನಕುಮಾರ, ರಾಘವೇಂದ್ರ ಚೌಡ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net