

ಗಂಗಾವತಿ: ನಗರದ ಸಮಗ್ರ ಅಭಿವೃದ್ಧಿಗೆ ಅನುದಾನ ಕ್ರೋಢೀಕರಿಸಲಾಗುತ್ತಿದ್ದು, ಎಲ್ಲ ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಮಾಲಸಾಬ್ ದಾದೇಸಾಬ್ ಹೇಳಿದರು.
ನಗರದ 13ನೇ ವಾರ್ಡ್ ಶರಣಬಸವೇಶ್ವರ ನಗರದಲ್ಲಿ 15ನೇ ಹಣಕಾಸು ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಗುರುವಾರ ಮಾತನಾಡಿದರು.
ನಗರದ ಸೌಂದರೀಕರಣ ಮತ್ತು ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ವಿಶೇಷ ಆಸಕ್ತಿವಹಿಸಿದ್ದು, ಮೊದಲ ಹಂತದಲ್ಲಿ ಒಂದೇ ಸೂರಿನಡಿ ವ್ಯಾಪಾರ ವಹಿವಾಟು ಯೋಜನೆಗೆ ಚಾಲನೆ ನೀಡಲಾಗುವುದು. ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಬೀದಿ ದೀಪಗಳ ನಿರ್ವಹಣೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.
ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ ದೊಡ್ಮನಿ ಮಾತನಾಡಿ, ಶರಣಬಸವೇಶ್ವರ ನಗರದಲ್ಲಿ ಪೇವರ್ಸ್ ಕಾಮಗಾರಿಗೆ 6ಲಕ್ಷ ರೂ. ಮಂಜೂರಾಗಿದ್ದು, ವಾರ್ಡ್ ಜನತೆ ನಿರೀಕ್ಷೆಯಂತೆ ಅಭಿವೃದ್ಧಿ ಮಾಡಲಾಗುವುದು ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯ ಉಮೇಶ ಸಿಂಗನಾಳ್, ಮುಖಂಡರಾದ ರಮೇಶ ಹಾದಿಮನಿ, ದುರುಗೇಶ ದೊಡ್ಮನಿ ಸೇರಿ ವಾರ್ಡ್ ಮುಖಂಡರಿದ್ದರು.