

ಗಂಗಾವತಿ: ಬಡವರ ಪರ ಯೋಜನೆ ರೂಪಿಸುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡತನ ನಿವಾರಣೆ ಸಾಧ್ಯವಿದ್ದು, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳೇ ಸಾಕ್ಷಿ ಎಂದು ಮುದ್ದೇಬಿಹಾಳ್ ಶಾಸಕ, ತಾಲೂಕು ಉಸ್ತುವಾರಿ ಅಪ್ಪಾಜಿ ನಾಡಗೌಡ ಹೇಳಿದರು.
ಸರ್ಕಾರದ ಸಮರ್ಪಣೆ ಸಂಕಲ್ಪ ಸಮಾವೇಶ ನಿಮಿತ್ತ ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ನಗರ ಬ್ಲಾಕ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸುಳ್ಳು ಹೇಳಿ ಮತ ಪಡೆಯುವ ಬಿಜೆಪಿಗೆ ರಾಜ್ಯದ ಜನತೆಗೆ ತಕ್ಕ ಪಾಠ ಕಲಿಸಿದ ಪರಿಣಾಮ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿ ಕಾಣದ ಮತ್ತು ಗ್ರಾಮದ ಲೆಕ್ಕದಲ್ಲಿರದ ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ೋಷಿಸುವ ಮೂಲಕ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದ್ದು, ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಿಸುವ ಯೋಜನೆ ಜಾರಿಗೊಳಿಸುತ್ತಿದೆ. ಮೇ 20ರಂದು ಹೊಸಪೇಟೆಯಲ್ಲಿ ನಡೆಯುವ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಹಲವು ಯೋಜನೆಗಳ ದಾಖಲೆ ಪತ್ರಗಳನ್ನು ಅರ್ಹ ಲಾನುಭವಿಗಳಿಗೆ ವಿತರಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾವೇಶ ಯಶಸ್ವಿಗೊಳಿಸಲು ಮನವಿ ಮಾಡಿದರು.
ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ ಮಾತನಾಡಿ, ಎಲ್ಲ ವರ್ಗದವರನ್ನು ಸಮನಾಗಿ ಕಾಣುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧ್ಯ. ಸಮಾವೇಶದಲ್ಲಿ ಭಾಗವಹಿಸುವ ಜನರೇ ಪಕ್ಷ ಸಂಘಟನೆಗೆ ಸಾಕ್ಷಿಯಾಗಲಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ನಗರಸಭೆ ಸದಸ್ಯ ಶಾಮೀದ್ ಮನಿಯಾರ್, ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್, ಡಿಸಿಸಿ ಉಪಾಧ್ಯಕ್ಷ ಅಜಗರ್‌ಅಲಿ, ಮುಖಂಡರಾದ ರಾಜಶೇಖರ್ ಮುಷ್ಟೂರು, ಎಸ್.ಕ್ರುದ್ದೀನ್‌ಅಲಿ, ಎಚ್.ಎಸ್.ಭರತ್, ಸರ್ವೇಶ ಮಾಂತಗೊಂಡ, ಎಚ್.ಎಂ.ಶೈಲಜಾ, ಸುರೇಶ ಗೌರಪ್ಪ, ರಮೇಶಗೌಳಿ, ಅಯೂಬ್ ಖಾನ್ ಇತರರಿದ್ದರು.
ಅನ್ಸಾರಿ ಬೆಂಬಲಿಗರಿಂದ ಪ್ರತ್ಯೇಕ ಮೀಟಿಂಗ್: ಸಮರ್ಪಣೆ ಸಂಕಲ್ಪ ಸಮಾವೇಶದ ಪೂರ್ವಭಾವಿ ಕುರಿತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದ ಬೆಂಬಲಿಗರು ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಪ್ರತ್ಯೇಕ ಸಭೆ ನಡೆಸಿದರು. ಮಧ್ಯಾಹ್ನ 3ಕ್ಕೆ ಆರಂಭವಾಗಬೇಕಿದ್ದ ಸಭೆ, ರಾತ್ರಿ 7ಕ್ಕೆ ಶುರುವಾಯಿತು. ಮಧ್ಯಾಹ್ನದಿಂದಲೇ ಸಭೆಗೆ ಅನ್ಸಾರಿ ಬರುತ್ತಿರುವ ಬಗ್ಗೆ ಬೆಂಬಲಿಗರು ಹೇಳುತ್ತಿದ್ದರೂ ಕೊನೆಗೂ ಗೈರಾದರು. ಸಭೆಯಲ್ಲಿ ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಜಿಪಂ ಮಾಜಿ ಸದಸ್ಯ ಅಮರೇಶಗೋನಾಳ್, ಮುಖಂಡರಾದ ಎಸ್.ಬಿ.ಖಾದ್ರಿ, ವಿಶ್ವನಾಥ ಮಾ.ಪಾಟೀಲ್ ಸೇರಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಿದ್ದರು.
ಜನಪರ ಕಾಳಜಿಯ ಕಾಂಗ್ರೆಸ್ ಪಕ್ಷ ಬಡವರ ಮತ್ತು ಶೋಷಿತರ ಧ್ವನಿಯಾಗಿದ್ದು ಪಕ್ಷ ಜಾರಿಗೊಳಿಸಿರುವ ಯೋಜನೆಗಳೇ ಸಾಕ್ಷಿ. ಸಾಧನಾ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಕ್ಷೇತ್ರದಿಂದ ಭಾಗವಹಿಸಲಿದ್ದಾರೆ.
ಎಚ್.ಆರ್.ಶ್ರೀನಾಥ
ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಮತ್ತು ಮಾಜಿ ಎಂಎಲ್ಸಿ