ಸಾಗುವಳಿದಾರರಿಗೆ ಅನ್ಯಾಯವಾಗಲು ಬಿಡಲ್ಲ ಎಂದ ಶಾಸಕ ಪರಣ್ಣಮುನವಳ್ಳಿ

26092022 gangavati bagar hukkum meeting
Published on

ಗಂಗಾವತಿ: ಅಕ್ರಮ ಸಕ್ರಮ ಯೋಜನೆಯಡಿ ಫಲಾನುಭವಿಗಳಿಗೆ ಶೀಘ್ರವೇ ತಾತ್ಕಾಲಿಕ ಸಾಗುವಳಿ ಚೀಟಿ ನೀಡಲಾಗುತ್ತಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ಶಾಸಕ ಹಾಗೂ ಸಮಿತಿ ಅಧ್ಯಕ್ಷ ಪರಣ್ಣ ಮುನವಳ್ಳಿ ಹೇಳಿದರು.

ನಗರದ ತಾಪಂ ಆವರಣದ ಶಾಸಕರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಗಂಗಾವತಿ ವಿಧಾನಸಭೆ ಕ್ಷೇತ್ರದ ಬಗರಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿದರು. ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 3,400 ಅರ್ಜಿಗಳು ಸ್ವೀಕೃತವಾಗಿದ್ದು, 300 ಅರ್ಜಿಗಳು ಮಾತ್ರ ಸಕ್ರಮವಾಗಿವೆ ಅದರಲ್ಲಿ ಗಂಗಾವತಿ ಭಾಗದಲ್ಲಿ 20 ಮತ್ತು ಕೊಪ್ಪಳ ಭಾಗದಲ್ಲಿ 14 ಅರ್ಜಿಗಳು ಮಾನ್ಯಗೊಂಡಿದ್ದು, ದಾಖಲೆ ಪರಿಶೀಲನೆ ನಂತರ ಸಾಗುವಳಿ ಚೀಟಿ ವಿತರಿಸಲಾಗುವುದು. ಸ್ವೀಕೃತಗೊಂಡ ಬಹುತೇಕ ಭೂಮಿ ಅರಣ್ಯ ವ್ಯಾಪ್ತಿಯಲ್ಲಿದ್ದರಿಂದ ಇತ್ಯರ್ಥವಾಗುತ್ತಿಲ್ಲ. 40ವರ್ಷದಿಂದಲೂ ಸಾಗುವಳಿ ಮಾಡುತ್ತಿದ್ದರೆ, ಅಂತಹ ಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರದ ಮೇಲೆ ಗಮನಸೆಳೆಯಲಾಗುತ್ತಿದ್ದು, ಸಾಗುವಳಿದಾರರಿಗೆ ಅನ್ಯಾಯವಾಗಲು ಬಿಡಲ್ಲ. ಸೂಕ್ತ ದಾಖಲೆಗಳಿಲ್ಲದಿದ್ದರಿಂದ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿವೆ.

ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡಕ್ಕೆ ಪರಿಶೀಲಿಸಲು ಸೂಚಿಸಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಆಶ್ರಯ ವಿವಿಧ ಯೋಜನೆಯಡಿ 1800ಕ್ಕೂ ಹೆಚ್ಚು ಮನೆಗಳು ಮಂಜೂರಾಗಿದ್ದು, ನಗರ ಭಾಗದಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಶುರುವಾಗಿದೆ. ಅಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು ಸರಿಯಲ್ಲ. ಇದರಿಂದ ಕೆಲಸ ಮಾಡಲು ನೌಕರರು ಹಿಂದೇಟು ಹಾಕಲಿದ್ದು, ಅನ್ಯಾಯ ಮತ್ತು ಅವಮಾನವಾಗಿದ್ದರೆ ಸೂಕ್ತ ದಾಖಲೆ ನೀಡಿ ಪ್ರಕರಣ ದಾಖಲಿಸಲಿ ಎಂದರು. ಸಭೆಯಲ್ಲಿ ಅರ್ಜಿಗಳ ತ್ವರಿತ ವಿಲೇವಾರಿ ಕುರಿತು ಕೊಪ್ಪಳ ಮತ್ತು ಗಂಗಾವತಿ ಕಂದಾಯ, ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ಯು.ನಾಗರಾಜ್, ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲೇ, ಸಮಿತಿ ಸದಸ್ಯರಾದ ರಾಧಾಉಮೇಶ, ಸಿದ್ಧಲಿಂಗಯ್ಯಗಡ್ಡಿಮಠ, ಕರುಣಾಕರ್, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ,ಮೈನುದ್ದೀನ್,ಮಹೇಶ ದಲಾಲ್ ಸೇರಿ ಗ್ರಾಮಲೆಕ್ಕಾಧಿಕಾರಿಗಳು ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net