

ಗಂಗಾವತಿ: ಅಜ್ಞಾನದ ಅಂಧಕಾರ ಕಳೆಯುವುದು ದೀಪೋತ್ಸವದ ಉದ್ದೇಶವಾಗಿದ್ದು, ಇದು ಸಂಬಂಧಗಳನ್ನು ವೃದ್ಧಿಸುವ ಸಂಕೇತ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ನಗರದ ಶಾರದಾ ನಗರದ ಶ್ರೀಶಾರದಾಂಬೆ ದೇವಾಲಯಲ್ಲಿ ಶಂಕರ ಮಠದಿಂದ ಕಾರ್ತಿಕ ಮಾಸ ನಿಮಿತ್ತ ಶುಕ್ರವಾರ ಹಮ್ಮಿಕೊಂಡ ಸಾಮೂಹಿಕ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶೃಂಗೇರಿ ಉಭಯಶ್ರೀಗಳ ಅನುಗ್ರಹ ದೊಂದಿಗೆ ಶ್ರೀಮಠದಲ್ಲಿ ಧಾರ್ಮಿಕ, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಾತಿ, ವರ್ಗ ಬೇಧವಿಲ್ಲದೇ ಸಮಾಜಮುಖಿ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರವಿದೆ. ದೀಪೋತ್ಸವದ ಮೂಲಕ ಸರ್ವ ಸಮುದಾಯಕ್ಕೆ ಬೆಳಕು ದಯಪಾಲಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದರು.
ನಗರಸಭೆ ಮಾಜಿ ಸದಸ್ಯೆ ಸುಮತೀ ದುರ್ಗಾದಾಸ್ ಭಂಡಾರಕರ್ ಮಾತನಾಡಿ, ಸಂಸ್ಕೃತಿ, ಸಂಸ್ಕಾರ, ಸನಾತನದ ರಕ್ಷಣೆಗೆ ಮಠ ಮಾನ್ಯಗಳು ಶ್ರಮಿಸಬೇಕಿದೆ. ಗ್ರಾಮೀಣ ಭಾಗದಿಂದಲೇ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಶಾರದಾ ಶಂಕರ ಭಜನಾ ಮಂಡಳಿ, ಸಪ್ತದೇವ ಭಜನಾ ಮಂಡಳಿ ಮತ್ತು ಸೌಂದರ್ಯ ಲಹರಿ ಭಗಿನಿಯರ ಸಂಘದ ಸದಸ್ಯರಿಂದ ಪಾರಾಯಣ ಮತ್ತು ಭಜನೆ ಜರುಗಿತು. ಚಿತ್ತಾರದ ಕಲಾವಿದೆ ಸುವರ್ಣ ಬಿಡಿಸಿದ ದೇವರ ಮೂರ್ತಿಗಳ ರಂಗೋಲಿ ಚಿತ್ರಗಳು ಗಮನಸೆಳೆದವು. ಪ್ರಧಾನ ಅರ್ಚಕ ಕುಮಾರ್ ಭಟ್ ಪೌರೋಹಿತ್ಯದಲ್ಲಿ ಕಾರ್ತಿಕ ಮಾಸದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖಂಡರಾದ ರಾಘವೇಂದ್ರ ಅಳವಂಡಿಕರ್, ಜಗನ್ನಾಥ ಅಳವಂಡಿಕರ್, ರತ್ನಾಬಾಯಿ, ಸುದರ್ಶನ ವೈದ್ಯ ಸೇರಿ ಮಹಿಳಾ ಭಜನಾ ಮಂಡಳಿ ಸದಸ್ಯರಿದ್ದರು.