

ಗಂಗಾವತಿ: ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯಭಾಗ್ಯಕ್ಕೆ ನಾಂದಿ ಹಾಡಬೇಕಿದ್ದು, ವಿಟಮಿನ್ ಪೂರಕ ಆಹಾರ ಬಳಕೆಗೆ ಆದ್ಯತೆ ನೀಡುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ.ಪ್ರಹ್ಲಾದ್ ಸಲಹೆ ನೀಡಿದರು.
ತಾಲೂಕಿನ ಹಣವಾಳ ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹೇರೂರು ವಲಯದ ಸರಸ್ವತಿ ಜ್ಞಾನ ವಿಕಾಸ ಕೇಂದ್ರದಿಂದ ಗುರುವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಹಸಿ ತರಕಾರಿಗಳಿಂದ ದೊರೆಯುವ ಪೋಷಕಾಂಶಗಳು ಆರೋಗ್ಯ ಸುಧಾರಣೆ ನೆರವಾಗಲಿದ್ದು, ಮೊಳಕೆ ಬರಿಸಿದ ಕಾಳುಗಳು ವಿಟಮಿನ್‌ಗಳಿಂದ ಕೂಡಿವೆ. ಪೌಷ್ಟಿಕ ಆಹಾರಗಳು ದೈಹಿಕ ಮತ್ತು ಮಾನಸಿಕ ಸ್ಥಿಮಿತವನ್ನು ಕಾಪಾಡಲಿವೆ ಎಂದರು. ಪೌಷ್ಟಿಕ ಆಹಾರ ಬಳಕೆ ಮತ್ತು ತಯಾರಿಕೆ ಕುರಿತು ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆ ಮೂಲಕ ಆಹಾರ ತಯಾರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಗ್ರಾಪಂ ಅಧ್ಯಕ್ಷೆ ವೆಂಕಮ್ಮ, ಜನ ಜಾಗತಿ ವೇದಿಕೆ ಸದಸ್ಯ ಎಂ.ಸತ್ಯನಾರಾಯಣ, ಮುಖಂಡ ಸೋಮನಾಥ ಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ, ಯೋಜನೆ ವಲಯ ಮೇಲ್ವಿಚಾರಕ ಮಂಜುನಾಥ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾರದಾ, ಸೇವ ಪ್ರತಿನಿಧಿ ನೀಲಾವತಿ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿದ್ದರು.