

ಗಂಗಾವತಿ: ತಾಲೂಕಿನ ಸಂಗಾಪುರ ನೀರು ಬಳಕೆದಾರರ ಸಹಕಾರ ಸಂಘ ವ್ಯಾಪ್ತಿಯ ಗ್ರಾಮಗಳಲ್ಲಿನ ಮಡಿ ಕಾಲುವೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಅನುದಾನ ದುರ್ಬಳಕೆಯಾಗಿದೆ ಎಂದು ರೈತ ಮುಖಂಡ ಖಮರ್ ಪಾಶಾ ಆರೋಪಿಸಿದ್ದಾರೆ.
ನಗರದಲ್ಲಿ ಹಳೇ ಪ್ರವಾಸಿ ಮಂದಿರದ ಬಳಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, 2023-24ನೇ ಸಾಲಿನಲ್ಲಿ ಸಂಗಾಪುರ ನೀರು ಬಳಕೆದಾರರ ಸಹಕಾರ ಸಂಘದ ವ್ಯಾಪ್ತಿಯ ಸಂಗಾಪುರ, ವಿರುಪಾಪುರ, ಬಂಡಿಬಸಪ್ಪ ಕ್ಯಾಂಪ್, ರಾಜಪುರ ಗ್ರಾಮಗಳಲ್ಲಿನ ರೈತರ ಭೂಮಿಯಲ್ಲಿನ ಮಡಿ ಕಾಲುವೆಗಳ ಅಭಿವದ್ಧಿಗೆ ಪ್ರತಿ ಪ್ಯಾಕೇಜ್‌ಗೆ 23ಲಕ್ಷದಂತೆ 31 ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಒಟ್ಟು 7.25 ಕೋಟಿ ರೂ. ಅನುದಾನ ಮಂಜೂರಾಗಿತ್ತು.
ಪ್ರತಿ ಪ್ಯಾಕೇಜಿನ ಅನುದಾನದಲ್ಲಿ ಶೇ.6 ಹಣ ನೀರು ಬಳಕೆದಾರರ ಸಂಘದ ಅಭಿವದ್ಧಿಗೆ ಉಳಿಸಿಕೊಳ್ಳುವ ಬಗ್ಗೆ ಸಂಘ ತೀರ್ಮಾನಿಸಿದ್ದರೂ, ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಘನಮಠಸ್ವಾಮಿ, ಸದಸ್ಯರಾದ ಎಚ್.ಎಂ ಪಾರ್ವತಿ, ವಿ.ಸೀತಾರತ್ನಂ ದುರ್ಬಳಕೆ ಮಾಡಿಕೊಂಡಿದ್ದಾರೆ. ಸಂಘದ ಉಳಿದ ಸದಸ್ಯರ ಸಹಿ ನಕಲು ಮಾಡಿ, ಠರಾವು ಹೊರಡಿಸಿ, ಹಣ ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ದಾಖಲೆ ಸಮೇತ ದೂರು ನೀಡಲಾಗಿದೆ.
ಹಣ ದುರ್ಬಳಕೆ, ಸಹಕಾರ ಸಂಘಗಳ ನಿಯಮಗಳ ಉಲ್ಲಂಘನೆ, ಕಳಪೆ ಕಾಮಗಾರಿ ಕುರಿತು ಮುನಿರಾಬಾದ್, ವಡ್ಡರಹಟ್ಟಿ, ಸಿಂಧನೂರಿನ ಜಲಸಂಪನ್ಮೂಲ ಮತ್ತು ಸಹಕಾರ ಇಲಾಖೆಗೆ ದಾಖಲೆ ಸಮೇತ ದೂರು ನೀಡಿದರೂ, ಇದುವರೆಗೂ ಕ್ರಮವಾಗಿಲ್ಲ. ಅಧಿಕಾರಿಗಳ ನಡೆಗೆ ಬೇಸತ್ತು ಸಹಕಾರ ಸಂಘದ ಕೆಲ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಕ್ರಮಕ್ಕಾಗಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಸಂಘದ ಸದಸ್ಯರಾದ ಹೇಮಸುಂದರರೆಡ್ಡಿ, ಎನ್.ಹರಿಪ್ರಸಾದ್, ಜಿ.ಸತ್ಯನಾರಾಯಣ, ರೈತ ಮುಖಂಡರಾದ ನಾಗರಾಜ, ವೀರರಾಘವಲು, ಮೆಹಬೂಬ ಅಲಿ, ನೆಕ್ಕಂಟಿ ಸುರೇಶ, ಮಹಾದೇವಪ್ಪ, ಸುಬ್ಬರಾವ್, ಗೋವಿಂದಪ್ಪ, ಸುಂದರರಾಜು ಇತರರಿದ್ದರು.
ತಪ್ಪಿಸ್ಥರ ವಿರುದ್ಧ ಕ್ರಮಕ್ಕಾಗಿ ಸರ್ಕಾರದ ಗಮನಸೆಳೆಯಲಾಗುತ್ತಿದ್ದು, ಹೋರಾಟ ಮುಂದುವರಿಯಲಿದೆ. ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಲಿ.
ಖಮರ್‌ಪಾಶಾ ರೈತ ಮುಖಂಡ, ಸಂಗಾಪುರ