

ಗಂಗಾವತಿ: ಇಲ್ಲಿನ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ಮಧ್ವನವಮಿ ಉತ್ಸವ ನಿಮಿತ್ತ ರಥೋತ್ಸವ ಗುರುವಾರ ಜರುಗಿತು.
ವಿಜಯಧ್ವಜ ವಿದ್ಯಾಪೀಠದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೇವಾಲಯದ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ವಾಯುಸ್ತುತಿ ಪುನಶ್ಚರಣ, ಪವಮಾನ ಹೋಮ, ಪೂರ್ಣಾಹುತಿ, ರಥೋತ್ಸವ, ವಿದ್ಯಾಪೀಠದ ಪ್ರಾಧ್ಯಾಪಕರಾದ ಅರುಣಾಚಾರ್ಯ ಜೋಶಿ, ವಾಗೀಶಾಚಾರ್ ಗೊರೇಬಾಳ್‌ರಿಂದ ಉಪನ್ಯಾಸ ಮತ್ತು ಪ್ರಸಾದ ವಿತರಣೆ ನೆರವೇರಿತು.
ಧಾರ್ಮಿಕ ಕಾರ್ಯಕ್ರಮ ಕುರಿತು ದೇವಾಲಯದ ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ ಮಾತನಾಡಿದರು. ವಿದ್ಯಾಪೀಠದ ವಿಚಾರಣಕರ್ತ ಶ್ಯಾಮಾಚಾರ್ ಬಂಡಿ, ಅರ್ಚಕ ಶ್ರೀಧರಾಚಾರ್ ರಾಜಪುರೋಹಿತ, ಮುಖಂಡ ರಾಘವೇಂದ್ರ ಮೇಗೂರು ಸೇರಿ ವಿಜಯಧ್ವಜ, ಸತ್ಯದೇವೇಶ ಭಜನಾ ಮಂಡಳಿ ಸದಸ್ಯರು, ವಿದ್ಯಾಪೀಠದ ವಿದ್ಯಾರ್ಥಿಗಳಿದ್ದರು.
ಯಾಜ್ಞವಲ್ಕ ದೇವಾಲಯ: ಜವಾಹರನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲೂ ಶ್ರೀ ಮಧ್ವನವಮಿ ಉತ್ಸವ ಆಚರಿಸಲಾಯಿತು. ದೇವಾಲಯದ ಮೂರ್ತಿಗಳಿಗೆ ಅಭಿಷೇಕ, ಅಷ್ಟೋತ್ತರ, ಮಧ್ವ ನಾಮ ಪಾರಾಯಣ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಅರ್ಚಕರಾದ ಪ್ರದೀಪ ಆಚಾರ್ ಮತ್ತು ಶ್ರೀನಿವಾಸ ಆಚಾರ್ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಧ್ವ ತತ್ವ ಸಿದ್ಧಾಂತ ಕುರಿತು ವಿದ್ವಾನ್ ಕಾರ್ತಿಕ ಪ್ರವಚನ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ಮುರಲೀಧರ ಕುಲಕರ್ಣಿ, ಮುಖಂಡರಾದ ನಾರಾಯಣರಾವ್ ವೈದ್ಯ, ರಾಘವೇಂದ್ರ ಮೇಗೂರು, ಗೋಪಿನಾಥ ದಿನ್ನಿ, ರಾಘವೇಂದ್ರ ಲೆಕ್ಕಿಹಾಳ, ಮನೋಹರ ಕುಲ್ಕರ್ಣಿ, ತಿರುಮಲರಾವ್ ಅಲಂಪಲ್ಲಿ, ವಿ.ರವಿಕುಮಾರ, ಗುರುರಾಜ್ ಚಿರ್ಚನಗುಡ್ಡ, ಮೋಹನ ಲೆಕ್ಕಿಹಾಳ್ ಇತರರಿದ್ದರು.