ಭಿನ್ನಮತ ಬಿಟ್ಟು ಒಗ್ಗಟ್ಟಾಗಿ ; ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

gangavathi cm visiti congress prachar sabhe
ಗಂಗಾವತಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಬೈರತಿ ಸುರೇಶ, ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಎಚ್.ಆಂಜನೇಯ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಪುರ ಇದ್ದರು.
Published on

ಗಂಗಾವತಿ: ಕೊಟ್ಟ ಮಾತು ಉಳಿಸಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ವೋಟು ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಂಗಳವಾರ ಸಂಜೆ ನಂತರ ಹಮ್ಮಿಕೊಂಡಿದ್ದ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 10 ವರ್ಷ ದೇಶವನ್ನಾಳಿದ ಬಿಜೆಪಿ ಸರ್ಕಾರವು ಜನರ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯತ್ತ ಗಮನಹರಿಸಿಲ್ಲ. ವಿಕಸಿತ ಭಾರತ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದ್ದು, ಜನಪರ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ವಿದೇಶದಿಂದ ಕಪ್ಪು ಹಣ ತಂದು, ಎಲ್ಲರ ಖಾತೆಗೆ 15 ಲಕ್ಷ ರೂ.ಹಾಕುವ ಬಗ್ಗೆ ಭರವಸೆ ನೀಡಿದ್ದ ನರೇಂದ್ರ ಮೋದಿ ಅವರು ಇದುವರಿಗೂ 15 ಪೈಸೆ ಹಾಕಿಲ್ಲ. ಉದ್ಯೋಗ ಸೃಷ್ಟಿಸದೆ ಪಕೋಡಾ ಮಾರುವಂತೆ ಉಡಾೆ ಸಲಹೆ ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ಯೋಜನೆಗಳ ಬಗ್ಗೆ ಟೀಕಿಸುವ ಬಿಜೆಪಿ ಮುಖಂಡರು ಬಿಜೆಪಿ ಆಡಳಿತಾವಧಿಯಲ್ಲಿನ ಯೋಜನೆಗಳ ಸ್ಥಿತಿಗತಿ ಬಗ್ಗೆ ಜನರಿಗೆ ತಿಳಿಸಲಿ. ಸುಳ್ಳು ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಗೆ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಜನರನ್ನು ಹಸಿನಿವಿಂದ ತಪ್ಪಿಸಲು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದು, ಇಂದಿಗೂ ರಾಜ್ಯದಲ್ಲಿ ಪಾಲಿಸಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ 600 ಭರವಸೆಗಳನ್ನು ಜನರಿಗೆ ನೀಡಿತ್ತು, ಆದರೆ, ಶೇ.10 ಈಡೇರಿಸಲಿಲ್ಲ. ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಕಡಿತಗೊಳಿಸಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ 165 ಭರವಸೆಗಳಲ್ಲಿ 158 ಈಡೇರಿಸಿದನ್ನು ಜನರು ಇನ್ನೂ ಮರೆತಿಲ್ಲ. 2023ರಲ್ಲಿ ಪುನಃ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ದಲಿತ ಸಮುದಾಯದ ಯೋಜನೆಗಳಿಗೂ ನಿರೀಕ್ಷೆಗೂ ಮೀರಿದ ಅನುದಾನ ನೀಡಲಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ದಲಿತ ವರ್ಗದ ಅಭಿವೃದ್ಧಿಗೆ ಯೋಜನೆ ಜಾರಿಗೆ ತರದೆ ಎಸ್‌ಟಿಪಿ, ಟಿಎಸ್‌ಪಿ ಅನುದಾನ ಕಡಿತಗೊಳಿಸಿದೆ. ಅನ್ನ, ಶಾದಿ, ಮೈತ್ರಿ, ಮನಸ್ವಿನಿ, ಕ್ಷೀರಾ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿ ಬಡ ಪರ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕಿದೆ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಪಕ್ಷದ ಮುಖಂಡರು ಶ್ರಮಿಸಬೇಕಿದೆ. ಭಿನ್ನಮತ ಏನೀದ್ದರೂ ಎಲ್ಲವೂ ಬಿಟ್ಟು ಒಗ್ಗಟ್ಟಾಗಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರನ್ನು ಸೋಲಿಸಿ ತಪ್ಪು ಮಾಡಿದ್ದೀರಿ. ಗೆದ್ದಿದ್ದರೆ ಮಂತ್ರಿ ಮಂಡಳದಲ್ಲಿ ಮಂತ್ರಿಯಾಗುವ ಯೋಗವಿತ್ತು. ಈ ಹಿಂದೆ ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕ್ಷೇತ್ರದ ಜನತೆ ನಿರೀಕ್ಷೆಗೂ ಮೀರಿ ಬೆಂಬಲಿಸಿದ್ದಾರೆ. ಕ್ಷೇತ್ರದ ಋಣ ಎಂದಿಗೂ ಮರೆಯಲ್ಲ ಎಂದರು.

ಸಚಿವರಾದ ಬೈರತಿ ಸುರೇಶ, ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಎಚ್.ಆಂಜನೇಯ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಪುರ, ಮಾಜಿ ಅಧ್ಯಕ್ಷೆ ಲಲಿತಾರಾಣಿ ರಾಯಲು, ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ್ ಇತರರಿದ್ದರು.

ಅಸಮಾಧಾನ ಹೊರಹಾಕಿದ ಅನ್ಸಾರಿ

ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತನಾಡುವ ಸಂದರ್ಭ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಗ್ಗೆ ಅನ್ಸಾರಿ ಅಸಮಾಧಾನ ಹೊರಹಾಕಿದ್ದು, ಪಕ್ಷದವರೇ ಬೆನ್ನಿಗೆ ಚೂರಿ ಹಾಕಿದರು ಎಂದು ಮುಖಂಡರ ಹೆಸರೇಳದೆ ಆಕ್ರೋಶ ವ್ಯಕ್ತಪಡಿಸಿದರು. ನಾನು ಶಾಶ್ವತ ರಾಜಕಾರಣಿಯಲ್ಲ, ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಅವಕಾಶ ನೀಡಿದರೆ ಜನರೊಂದಿಗೆ ಇರ‌್ತೀನಿ, ಇಲ್ಲದಿದ್ದರೆ ಕುಟುಂಬದೊಂದಿಗೆ ನೆಮ್ಮದಿ ಜೀವನ ನಡೆಸುತ್ತೇನೆ ಎಂದರು. ಸ್ವಾಗತ ಭಾಷಣ ಸಂದರ್ಭದಲ್ಲೂ ಶ್ರೀನಾಥ ಮತ್ತು ಮಲ್ಲಿಕಾರ್ಜುನ ನಾಗಪ್ಪ ಇಬ್ಬರ ಹೆಸರು ಬಿಟ್ಟು ಎಲ್ಲರ ಹೆಸರು ಹೇಳಿದಾಗ, ಸಚಿವ ತಂಗಡಗಿ ಮಧ್ಯಪ್ರವೇಶಿಸಿ ಇಬ್ಬರ ಹೆಸರನ್ನು ಹೇಳುವ ಮೂಲಕ ಗೊಂದಲ ಸರಿದೂಗಿಸಿದರು.

ಕಾಂಗ್ರೆಸ್ ಸಮಾವೇಶದಲ್ಲಿ ಭಿನ್ನಮತ ಸ್ಫೋಟ

ಸಮಾವೇಶದಲ್ಲಿ ಶಿವರಾಜ ತಂಗಡಗಿ ಮತ್ತು ಎಚ್.ಆರ್.ಶ್ರೀನಾಥ ನಡುವೆ ಜಟಾಪಟಿ ಪಡೆಯಿತು.
ಸಮಾವೇಶದಲ್ಲಿ ಶಿವರಾಜ ತಂಗಡಗಿ ಮತ್ತು ಎಚ್.ಆರ್.ಶ್ರೀನಾಥ ನಡುವೆ ಜಟಾಪಟಿ ಪಡೆಯಿತು.


ಸಮಾವೇಶದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ನಡುವಿನ ಭಿನ್ನಮತ ವೇದಿಕೆ ಮೇಲೆ ಸ್ಫೋಟಗೊಂಡಿತು. ಇಬ್ಬರ ನಡುವಿನ ಮುಸುಕಿನ ಗುದ್ದಾಟ ವೇದಿಕೆಯಲ್ಲಿದ್ದ ಮುಖಂಡರಿಗೆ ಮುಜುಗರ ಉಂಟಾಯಿತು. ಸಿಎಂ ಸಿದ್ದರಾಮಯ್ಯ ವೇದಿಕೆ ಬರುವ ಮುನ್ನ ಮುಂದಿನ ಸಾಲಿನ ಆಸನದಲ್ಲಿ ಎಚ್.ಆರ್.ಶ್ರೀನಾಥಗೆ ಅವಕಾಶ ನೀಡದಿದ್ದಕ್ಕೆ ವೇದಿಕೆ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಪುರ ಅವರೊಂದಿಗೆ ವಾಗ್ವಾದ ನಡೆಸಿದರು. ಸಮಜಾಯಷಿ ನೀಡಲು ಶಿವರಾಜ ತಂಗಡಗಿ ಯತ್ನಿಸಿದರೂ ಶ್ರೀನಾಥ ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಆಸನಗಳನ್ನು ಎತ್ತಿಹಾಕುವಷ್ಟರ ಮಟ್ಟಿಗೆ ಪರಿಸ್ಥಿತಿ ಮುಂದುವರಿದಿತ್ತು. ಮುಂದಿನ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡುತ್ತಿದ್ದಂತೆ ಸಮಾಧಾನಗೊಳಿಸಿದರು. ಸಿಎಂ ವೇದಿಕೆಯಲ್ಲಿದ್ದಾಗ ತಮ್ಮ ಭಾಷಣಕ್ಕೆ ಅವಕಾಶ ನೀಡದಿದ್ದಾಗ ಆಕ್ರೋಶಗೊಂಡ ಶ್ರೀನಾಥ, ಮೈಕ್‌ನತ್ತ ತೆರಳಿದರು. ಆಗ ಸಚಿವ ತಂಗಡಗಿ ತಡೆಯಲೆತ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಶ್ರೀನಾಥ ಮಾತನಾಡುತ್ತಿದ್ದಂತೆ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಅಡ್ಡಿಪಡಿಸಲೆತ್ನಿಸಿದರು. ಇದಕ್ಕೆ ಬೆಂಬಲಿಗರನ್ನು ಅನ್ಸಾರಿ ಪ್ರಚೋದಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತಕ್ಕೆ ತಲುಪುತ್ತಿದ್ದಂತೆ ಸಚಿವರಾದ ಬೈರತಿ ಸುರೇಶ, ಶಿವರಾಜ ತಂಗಡಗಿ ಇಬ್ಬರನ್ನು ಸಮಾ ಧಾನಪಡಿಸಿದರು. ಘಟನೆಯಿಂದ ಜನರಿಗೆ ಪುಕ್ಕಟೆ ಮನರಂಜನೆ ಸಿಕ್ಕರೆ, ಮುಖಂಡರು ಮುಜಗರ ಅನುಭವಿಸುವ ಸ್ಥಿತಿ ಬಂತು.

ಶ್ರೀನಾಥ ಮನೆಗೆ ಸಿಎಂ ಭೇಟಿ

ಇಕ್ಬಾಲ್ ಅನ್ಸಾರಿ-ಶ್ರೀನಾಥ ನಡುವಿನ ಭಿನ್ನಮತದ ನಡುವೆಯೂ ಸಿಎಂ ಸಿದ್ದರಾಮಯ್ಯ ಶ್ರೀನಾಥ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ನೇರ ಶ್ರೀನಾಥ ಮನೆಗೆ ಬಂದ ಸಿದ್ದರಾಮಯ್ಯ, ಕುಟುಂಬ ಸದಸ್ಯರೊಂದಿಗೆ ಕೆಲಕಾಲ ಕಳೆದರು. ಮಾಜಿ ಸಂಸದ ಎಚ್.ಜಿ.ರಾಮುಲು ಮನೆಯಲ್ಲಿ ಇರದಿದ್ದರಿಂದ ಮೊಬೈಲ್ ಮೂಲಕ ಕುಶಲೋಪರಿ ವಿಚಾರಿಸಿದರು. ಈ ಭೇಟಿ ಅನ್ಸಾರಿ ಬೆಂಬಲಿಗರಿಗೆ ಹಿನ್ನಡೆಯಾಗಿದ್ದು, ಪರ-ವಿರೋಧದ ಚರ್ಚೆ ಶುರುವಾಗಿದೆ. ಶ್ರೀನಾಥ ಪರ ಸಿದ್ದರಾಮಯ್ಯ ಇದ್ದಾರೆಂಬ ಸಂದೇಶ ರವಾನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net