

ಗಂಗಾವತಿ: ಲೋಕಸಭೆ ಚುನಾವಣೆ ತಾಲೂಕಿನ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ತಾಲೂಕಾಡಳಿತ ವಿವಿಧ ರೀತಿಯ ಕಸರಸ್ತು ನಡೆಸಿದ್ದು, ವಿಶೇಷ ಮತಗಟ್ಟೆಗಳ ನಿರ್ಮಾಣದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದೆ.
ಗಂಗಾವತಿ ಕ್ಷೇತ್ರದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ 235 ಮತಗಟ್ಟೆಗಳಿದ್ದು, ಮತದಾರರನ್ನು ಸೆಳೆಯಲು ತಾಲೂಕಾದ್ಯಂತ 9 ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ರೂಪಿಸಲಾಗಿದೆ. 5 ಸಖಿ, ಯುವ, ಅಂಗವಿಕಲರ, ಮಾದರಿ ಮತ್ತು ವಿಷಯವಾರು ಮತಗಟ್ಟೆಗಳೆಂದು ಹೆಸರಿಡಲಾಗಿದೆ. ಒಂದೊಂದು ವಿಶೇಷ ಮತಗಟ್ಟೆಗಳನ್ನು ಹೆಸರಿಗೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ನಿರ್ವಹಣೆ ಜವಾಬ್ದಾರಿಯನ್ನು ನಗರ ಮತ್ತು ತಾಪಂ ಕಚೇರಿಗೆ ವಹಿಸಲಾಗಿದ್ದು, ಮೂಲ ಸೌಕರ್ಯ ಒದಗಿಸುವುದರ ಜತೆಗೆ ಮತದಾರರನ್ನು ಕರೆತರಬೇಕಿದೆ. ಗ್ರಾಮೀಣ ಭಾಗದಲ್ಲಿ ಗ್ರಾಪಂ ವಿಶೇಷ ಮುತುವರ್ಜಿವಹಿಸಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ನಗರ ವ್ಯಾಪ್ತಿಯಲ್ಲಿ ವಿಶೇಷವಾಗಿ ಕಾರ್ಯ ರೂಪಿಸುವಲ್ಲಿ ನಗರಸಭೆ ನಿರ್ಲಕ್ಷ್ಯವಹಿಸಿದೆ.
ಎಲ್ಲೆಲ್ಲಿ ವಿಶೇಷ ಮತಗಟ್ಟೆ: ಸರೋಜಮ್ಮ ಪಿಯು ಕಾಲೇಜು, ಎಪಿಎಂಸಿ ಕಚೇರಿ, ಬಾಲಕಿಯರ ಸ.ಹಿ.ಪ್ರಾ.ಶಾಲೆ, ವಡ್ಡರಹಟ್ಟಿ ಕ್ಯಾಂಪ್ ಕೃಷಿ ತರಬೇತಿ ಕೇಂದ್ರ ಮತ್ತು ಮುದ್ದಲಾಪುರದ ಸ.ಹಿ.ಪ್ರಾ.ಶಾಲೆಯನ್ನು ಸಖಿ (ಪಿಂಕ್) ಮತಗಟ್ಟೆಯನ್ನಾಗಿ ಪರಿವರ್ತಿಸಲಾಗಿದೆ. ನಗರದ ಲೋಕೋಪಯೋಗಿ ಇಲಾಖೆ ಯುವ ಮತಗಟ್ಟೆ, ವೆಂಕಟಗಿರಿ ಗ್ರಾಪ ಕಚೇರಿ ಅಂಗವಿಕಲರ ಸ್ನೇಹಿ ಮತಗಟ್ಟೆ , ಬಸಾಪಟ್ಟಣ ಗ್ರಾಪಂ ಮಾದರಿ ಮತಗಟ್ಟೆ ಮತ್ತು ಹಿರೇಬೆಣಕಲ್ ಸ.ಹಿ.ಪ್ರಾ.ಶಾಲೆಯನ್ನು ಟೀಂ ಬೇಸ್ಡ್(ವಿಷಯವಾರು)ಮತಗಟ್ಟೆಯಾಗಿದೆ. ಮತದಾರರ ಸಂಖ್ಯೆ, ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಮತ್ತು ಮತದಾರರ ಮನಸ್ಥಿತಿ ಗಮನದಲ್ಲಿಟ್ಟುಕೊಂಡು ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಗಾಳಿ, ಬೆಳಕು ಸೇರಿ ಇತರೆ ಸೌಲಭ್ಯಗಳನ್ನು ಒದಗಿಸಲು ಸೂಚಿಸಲಾಗಿದ್ದು, ಪ್ರತಿಯೊಂದು ಮತಗಟ್ಟೆಯಲ್ಲೂ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.