

ಗಂಗಾವತಿ: ಜೀವನ ಶೈಲಿ ಆಧಾರದಲ್ಲಿ ನಿರೀಕ್ಷಿತ ಹೃದಯ ರೋಗ ತಡೆಗಟ್ಟಬಹುದಾಗಿದ್ದು, ಒತ್ತಡಕ್ಕೊಳಗಾಗದಂತೆ ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಈಶ್ವರ ಸವಡಿ ಹೇಳಿದರು.
ವಿಶ್ವ ಹೃದಯ ರೋಗ ವಿರೋಧಿ ದಿನ ನಿಮಿತ್ತ ನಗರದ ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆ, ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ನಾರಾಯಣ ಹೃದಯಾಲಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರ ಭಾವನೆಗಳನ್ನು ಅರಿಯುವ ಪುಟ್ಟ ಹೃದಯಕ್ಕೆ ಯಾವುದೇ ಕಾರಣಕ್ಕೂ ಒತ್ತಡ ಹಾಕಬಾರದು. ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಕರಲ್ಲೂ ಹೃದಯರೋಗ ಹೆಚ್ಚುತ್ತಿದ್ದು, ಹೃದಯ ಸಮಸ್ಯೆ ಎದುರಾದರೆ ಸಕಾಲಕ್ಕೆ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ತಜ್ಞ ವೈದ್ಯ ಡಾ.ಸತೀಶ ರಾಯ್ಕರ್ ಮಾತನಾಡಿ, ದುಶ್ಚಟಗಳು ಹೃದಯ ಸಂಬಂಧಿ ರೋಗಕ್ಕೆ ಕಾರಣವಾಗಲಿದ್ದು, ನಿಯಮಿತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ತರಕಾರಿ ಮತ್ತು ಹಸಿರು ಸೊಪ್ಪು ಹೆಚ್ಚು ಉಪಯೋಗಿಸುವಂತೆ ಸಲಹೆ ನೀಡಿದರು.
ಉಪವಿಭಾಗ ಆಸ್ಪತ್ರೆಯಿಂದ ಗಾಂಧಿ ವೃತ್ತದವರೆಗೆ ನಡೆದ ವಾಕಥಾನ್‌ನಲ್ಲಿ ಆರೋಗ್ಯ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಡಾ.ಎಸ್.ವಿ.ಸವಡಿ ಆಯುರ್ವೇದ ಆಸ್ಪತ್ರೆ ಆಡಳಿತಾಧಿಕಾರಿ ಬಸವರಾಜ ಸವಡಿ, ತಜ್ಞ ವೈದ್ಯರಾದ ಶರಣಪ್ಪ ಚಕೋಟಿ, ಡಾ.ಅಬೀದ್, ಡಾ.ಖಲಂದರ್, ಡಾ.ನವೀನ್, ಆರೋಗ್ಯ ಕಾರ್ಯಕರ್ಕರಾದ ಶಿವಾನಂದ ನಾಯ್ಕರ್, ಕೆ.ಆರ್. ರಾಜೀವ್, ಸ್ಯಾಮ್ಯೂಯೆಲ್ ಇತರರಿದ್ದರು.