

ಗಂಗಾವತಿ: ಕೃಷಿ ಉತ್ತೇಜನ ಕಾರ್ಯಕ್ರಮಗಳ ಮೂಲಕ ಮಹಿಳಾ ಕೃಷಿಕರು ಸ್ವಾವಲಂಬಿಗಳಾಗಬೇಕಿದ್ದು, ಆಧುನಿಕ ಕೃಷಿಯತ್ತ ಗಮನಹರಿಸಬೇಕಿದೆ ಎಂದು ಕೆವಿಕೆ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ.ಎಸ್.ಬಿ.ಗೌಡಪ್ಪ ಹೇಳಿದರು.
ನಗರದ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆತ್ಮಯೋಜನೆ, ಕೃಷಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ನಿರತ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿ ಚಟುವಟಿಕೆ ವಿಸ್ತರಣೆಯಲ್ಲಿ ಮಹಿಳಾ ಕೃಷಿಕರ ಪಾತ್ರ ಪ್ರಮುಖವಾಗಿದ್ದು, ಹೊಸತನ ಬೇಸಾಯದತ್ತ ಗಮನಹರಿಸಬೇಕು ಎಂದು ತಿಳಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಮಳಗಿ ಮಾತನಾಡಿ, ಕೆವಿಕೆ, ಕೃಷಿ ಇಲಾಖೆಯಲ್ಲಿ ರೈತ ಮಹಿಳೆಯರಿಗಾಗಿ ಹಲವು ಯೋಜನೆಗಳಿದ್ದು, ಸದ್ಬಳಕೆಗೆ ಮುಂದಾಗುವಂತೆ ಸಲಹೆ ನೀಡಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಚಂದ್ರಕಾಂತ ನಾಡಗೌಡ, ಸರ್ಕಾರಿ ಕೃಷಿ ಕಾಲೇಜಿನ ವಿಶೇಷಾಧಿಕಾರಿ ಡಾ.ವಿಶ್ವನಾಥ, ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ತಜ್ಞರಾದ ಡಾ.ಕವಿತಾ ಉಳ್ಳಿಕಾಶಿ, ಡಾ.ಆರ್.ಜ್ಯೋತಿ, ಆರ್.ಎಂ.ರೇವತಿ ಇತರರಿದ್ದರು.
ಇದೇ ಸಂದರ್ಭದಲ್ಲಿ ಕೃಷಿ ಸಾಧಕ ಮಹಾದೇವಪ್ಪ ಚಿಕ್ಕಜಂತಕಲ್‌ರನ್ನು ಸನ್ಮಾನಿಸಲಾಯಿತು. ಕೃಷಿ ಇಲಾಖೆ ಮತ್ತು ಕೆವಿಕೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಗಂಗಾವತಿ, ಮರಳಿ, ಕನಕಗಿರಿ ಭಾಗದ ರೈತ ಮಹಿಳೆಯರಿದ್ದರು.