

ಗಂಗಾವತಿ: ನಗರದ ಕುವೆಂಪು ಬಡಾವಣೆ ಬಳಿಯ ವಾಯುವಿಹಾರದ ಕೇಂದ್ರದಲ್ಲಿ ಹೆಚ್ಚುತ್ತಿರುವ ಅನೈತಿಕ ಚಟುವಟಿಕೆ ಮತ್ತು ಕಿಡಿಗೇಡಿಗಳ ಹಾವಳಿ ನಿಯಂತ್ರಿಸಲು ಒತ್ತಾಯಿಸಿ ವಿವಿಧ ಬಡಾವಣೆ ನಿವಾಸಿಗಳು ನಗರದ ಪೊಲೀಸ್ ಠಾಣೆ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ ಮಾತನಾಡಿ, ವಾಯುವಿಹಾರಕ್ಕೆ ಬರುವ ಮಹಿಳೆಯರು ಮತ್ತು ವೃದ್ಧರಿಗೆ ಕಿಡಿಗೇಡಿಗಳಿಗೆ ತೊಂದರೆ ಕೊಡುತ್ತಿದ್ದು, ಸಿಗರೇಟ್ ಹೊಗೆ ಬಿಡುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಬರ್ತಡೇ ಪಾರ್ಟಿ ನೆಪದಲ್ಲಿ ಎಲ್ಲೆಂದರಲ್ಲಿ ಮದ್ಯ ಸೇವನೆ ಚಟುವಟಿಕೆ ಹೆಚ್ಚುತ್ತಿದೆ. ವಿಚಾರಿಸಿದರೆ ಅನುಚಿತವಾಗಿ ವರ್ತಿಸುತ್ತಿದ್ದು, ಹಲ್ಲೆಗೆ ಮುಂದಾಗುತ್ತಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸುವುದರ ಜತೆಗೆ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸುವಂತೆ ಒತ್ತಾಯಿಸಿದರು.
ಜಯನಗರ, ಕುವೆಂಪು, ಸತ್ಯನಾರಾಯಣ ಪೇಟೆ, ಕುಮಾರರಾಮ ಬಡಾವಣೆ ನಿವಾಸಿಗಳು ಮನವಿ ಸ್ವೀಕರಿಸಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಮಾತನಾಡಿ, ಬಡಾವಣೆಯಲ್ಲಿ ಪ್ರತಿಯೊಂದು ಮನೆಯಲ್ಲೂ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪೊಲೀಸ್ ಗಸ್ತು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಟಿಎಪಿಸಿಎಂಎಸ್ ನಿರ್ದೇಶಕ ಜೋಗದ ನಾರಾಯಣಪ್ಪ ನಾಯಕ, ಮುಖಂಡರಾದ ನಾರಾಯಣರಾವ್ ವೈದ್ಯ, ಜೋಗದ ಹನುಮಂತಪ್ಪನಾಯಕ, ಡಾ.ವೀರನಗೌಡ, ಅಮರೇಗೌಡ, ರಾಘವೇಂದ್ರ ಮೇಗೂರು, ಸುರೇಶ ಗೌರಪ್ಪ, ಟಿ.ಆಂಜನೇಯಕ, ಎಂ.ಸಿ.ಹಿರೇಮಠ, ರಾಚಪ್ಪ ಸಿದ್ದಾಪುರ, ಲಂಕೇಶ ಗುಳದಳ್ಳಿ ಇತರರಿದ್ದಾರೆ.
ಅನುಚಿತವಾಗಿ ವರ್ತಿಸಿದ ನಾಲ್ವರ ವಶಕ್ಕೆ
ನಗರದ ಕುವೆಂಪು ಬಡಾವಣೆ ಬಳಿ ವಾಯುವಿಹಾರ ಕೇಂದ್ರದಲ್ಲಿ ವಾಯುವಿಹಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ನಾಲ್ವರನ್ನು ನಗರ ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ವೇಳೆ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯರಿಗೆ ತೊಂದರೆ ನೀಡಿದ್ದರಲ್ಲದೇ, ಸಿಗರೇಟ್ ಹೊಗೆ ಮುಖಕ್ಕೆ ಬಿಟ್ಟಿದ್ದಾರೆ. ವಿಚಾರಿಸಿದವರ ಮೇಲೆ ಹಲ್ಲೆ ನಡೆಸಲೆತ್ನಿಸಿದಾಗ, ಸ್ಥಳೀಯರು ಕಿಡಿಗೇಡಿಕೆಗಳನ್ನು ಹಿಡಿದುಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಕರಣವನ್ನು ಗಂಭೀರ ಪರಿಗಣಿಸಿರುವ ನಗರ ಪೊಲೀಸರು ಸ್ವಯಂಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ವೃತ್ತದಲ್ಲಿ ಶಾಲೆ ಬಳಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ, ತಂಬಾಕು ಪ್ರೇರಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.