

ಗಂಗಾವತಿ: ನರೇಗಾ ಕೂಲಿಕಾರರ ರಕ್ಷಣೆಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಾಪಂ ಇಒ ಲಕ್ಷ್ಮೀದೇವಿ ಹೇಳಿದರು.
ತಾಲೂಕಿನ ಜಂಗಮರಕಲ್ಗುಡಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ನರೇಗಾ ಕೂಲಿಕಾರರಿಗೆ ಆರೋಗ್ಯ ಅಮೃತ ಅಭಿಯಾನದಡಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆರೋಗ್ಯದ ಬಗ್ಗೆ ನಿಷ್ಕಾಳಜಿ ಸರಿಯಲ್ಲ.
ನಾವು ಆರೋಗ್ಯವಾಗಿದ್ದರೆ ಮಾತ್ರ ಕುಟುಂಬ ಸುರಕ್ಷಿತವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯದ ನಿಷ್ಕಾಳಜಿ ಹೆಚ್ಚಿದ್ದು, ಶಿಬಿರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಹಿಂಜರಿಕೆ ಬಿಟ್ಟು ತಪಾಸಣೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಶಿಬಿರ ಉದ್ದೇಶ ಮತ್ತು ಆರೋಗ್ಯ ರಕ್ಷಣೆ ಕುರಿತು ಪಿಡಿಒ ರಾಮುನಾಯ್ಕ ಮಾತನಾಡಿದರು. ಶಿಬಿರದಲ್ಲಿ 110ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಿಸಿ, ಚಿಕಿತ್ಸೆಗೆ ಸಲಹೆ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಶ್ರುತಿ ಧನಂಜಯ್, ಉಪಾಧ್ಯಕ್ಷೆ ಹುಲಿಗೆಮ್ಮ, ಸದಸ್ಯರಾದ ಮೈಲಾಪುರ ದೊಡ್ಡಪ್ಪ, ಕನಕರಾಜ, ಕಾರ್ಯದರ್ಶಿ ಪ್ರಭುರಾಜ ಪಾಟೀಲ್, ಕರವಸೂಲಿಗಾರ ಕೆ.ಎಚ್.ಮಹಾಂತೇಶ, ಸಂಯೋಜಕ ಶರಣಬಸವ, ಆರೋಗ್ಯ ಕಾರ್ಯಕರ್ತರಾದ ದುರಗೇಶ, ಶ್ರೀದೇವಿ ಇತರರಿದ್ದರು.