ಲೋಕಕಲ್ಯಾಣಾರ್ಥ ಶಾಂತಿ ಹೋಮ

Shanti Homa
ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಗಂಗಾವತಿ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ಪೇಜಾವರ ಮಠದಿಂದ ಲೋಕಕಲ್ಯಾಣಾರ್ಥ ವಿಶೇಷ ಶಾಂತಿ ಹೋಮ ಭಾನುವಾರ ಮಧ್ಯರಾತ್ರಿ ಜರುಗಿತು. ವಿಜಯಧ್ವಜ ಪೀಠದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿದ್ದರು.
Published on

ಗಂಗಾವತಿ: ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ತಾಲೂಕು ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಐತಿಹಾಸಿಕ ದೇವಾಲಯಗಳನ್ನು ಭಾನುವಾರ ಸಂಜೆ ಮುಚ್ಚಲಾಗಿದ್ದು, ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು.

ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ ಸಂಜೆ 4ರಿಂದಲೇ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ದೇವಾಲಯದಲ್ಲಿ ಎಲ್ಲ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಅದರಂತೆ ನಗರದ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯ, ನಗರೇಶ್ವರ, ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ, ನಿರಂತರ ಭಜನೆ ಮತ್ತು ಸಾಮೂಹಿಕ ಪಾರಾಯಣ ಹಮ್ಮಿಕೊಳ್ಳಲಾಗಿತ್ತು.

ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ಪೇಜಾವರ ಮಠದಿಂದ ಲೋಕಕಲ್ಯಾಣಾರ್ಥ ಸಾಮೂಹಿಕ ಶಾಂತಿ ಹೋಮ, ಪೂರ್ಣಾಹುತಿ ಮತ್ತು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ನದಿಯಲ್ಲಿ ಸಾಮೂಹಿಕ ಸ್ನಾನ: ತಾಲೂಕಿನ ಆನೆಗೊಂದಿಯಲ್ಲಿ ರಾಯರ ಮಠದಿಂದ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ಗ್ರಹಣ ಬಿಟ್ಟ ನಂತರ ಮಧ್ಯರಾತ್ರಿ 2ರ ನಂತರ ತುಂಗಭದ್ರಾ ನದಿಯಲ್ಲಿ ಸಾಮೂಹಿಕ ಸ್ನಾನ ಕೈಗೊಳ್ಳಲಾಯಿತು. ಸತ್ಯಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಮತ್ತು ಸಾಮೂಹಿಕ ಪಾರಾಯಣ ಹಮ್ಮಿಕೊಳ್ಳಲಾಗಿತ್ತು.

ಗ್ರಹಣ ಕುರಿತು ಸತ್ಯನಾರಾಯಣ ದೇವಾಲಯ ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ ಮಾಹಿತಿ ನೀಡಿದರು. ವಿಜಯ ಧ್ವಜ ವಿದ್ಯಾಪೀಠದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿದ್ದರು. ತಾಲೂಕಿನ ಸಂಗಾಪುರದ ಬಳಿಯ ಶ್ರೀ ಪ್ರತ್ಯಾಂಗೀರಾ ದೇವಿ ದೇವಾಲಯದಲ್ಲಿ ಒಣಮೆಣಸಿನ ಕಾಯಿ ಹೋಮ ನೆರವೇರಿಸಿದ್ದು, ವಿವಿಧ ಜಿಲ್ಲೆಯ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net