ಕತ್ತೆಕಲ್ಲು ಗುಡ್ಡದಲ್ಲಿ ಶಿಲಾಯುಗದ ಗವಿಚಿತ್ರ, ಶಿಲಾಸನ ಪತ್ತೆ

Gavichitra-Shilasa discovery
ಗಂಗಾವತಿ ತಾಲೂಕಿನ ಎಚ್.ಜಿ.ರಾಮುಲು ನಗರದ ಬಳಿಯ ಕತ್ತೆಕಲ್ಲು ಗುಡ್ಡದಲ್ಲಿ ಶಿಲಾಯುಗದ ಗವಿಚಿತ್ರ ಮತ್ತು ಶಿಲಾಸನ ಸೋಮವಾರ ಪತ್ತೆ ಹಚ್ಚಿರುವುದು. ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್, ಯುವಕರಾದ ಮಂಜುನಾಥ ದೊಡ್ಮನಿ, ಚಂದ್ರಶೇಖರ್ ಕುಂಬಾರ, ನಾಗರಾಜ್ ಶಿವಪುರ ಇದ್ದಾರೆ.
Published on

ಗಂಗಾವತಿ: ತಾಲೂಕಿನ ಎಚ್.ಜಿ.ರಾಮುಲು ನಗರದ ಬಳಿಯ ಕತ್ತೆಕಲ್ಲು ಗುಡ್ಡದಲ್ಲಿ ಶಿಲಾಯುಗದ ಗವಿಚಿತ್ರ ಮತ್ತು ಶಿಲಾಸನ ಸೋಮವಾರ ಪತ್ತೆ ಹಚ್ಚಲಾಗಿದ್ದು, ಅಧ್ಯಯನಕ್ಕೆ ಪೂರಕವಾಗಿದೆ.

ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ನೇತೃತ್ವದ ತಂಡ ಪತ್ತೆ ಹಚ್ಚಿದ್ದು, ಆದಿಮಾನವರು ಬಿಡಿಸಿರುವ ವರ್ಣ ಚಿತ್ರಗಳಿವೆ. ಗಂಗಾವತಿ ಮತ್ತು ಕೊಪ್ಪಳ ಸಂಪರ್ಕ ರಸ್ತೆಯ ಗಾಳಿ ದುರ್ಗಮ್ಮ ದೇವಾಲಯದಿಂದ ಒಂದು ಕಿ.ಮೀ. ಅಂತರದಲ್ಲಿ ಕತ್ತೆಕಲ್ಲುಗುಡ್ಡವಿದ್ದು, ದಕ್ಷಿಣಾಭಿಮುಖವಾಗಿರುವ ಕಲ್ಲಾಸರೆಯಲ್ಲಿ 17ನೇ ಶತಮಾನದ ಕನ್ನಡ ಶಾಸನವಿದೆ.

ಶಾಸನವು ಐದು ಸಾಲಿನಲ್ಲಿದ್ದು ಸೂರ್ಯ, ಚಂದ್ರ, ದ್ವಿನಾಮ ಮತ್ತು ಬಿಲ್ಲು ಬಾಣದ ಚಿತ್ರಗಳೊಂದಿಗೆ ಬರೆಯಲಾಗಿದೆ. ರಾಮನಾಥ ದೇವರ ಆರಾಧನೆಗಾಗಿ ಪತಿ ಚಿನ್ನಾಯಕನು 22 ಖಂಡುಗ ಹೊಲ ದಾನವಾಗಿ ನೀಡಿದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ.

ಈ ಬಗ್ಗೆ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ಶಾಸನ ಬರಹದಲ್ಲಿ ಹಲವು ದೋಷಗಳಿದ್ದು, ಶಾಸನೊಕ್ತ ರಾಮನಾಥ ದೇವರು ಮತ್ತು ಚಿನ್ನ ನಾಯಕರ‌್ಯಾರು ಎಂಬುದು ಅಧ್ಯಯನ ನಡೆಯಬೇಕಿದೆ. ಬೆಟ್ಟದ ತುದಿಯಲ್ಲಿ ವಿಶಾಲವಾದ ಗವಿ ಆದಿಮಾನವನ ತಾತ್ಕಾಲಿಕ ವಾಸದ ತಾಣವಾಗಿದ್ದು, ಛಾವಣಿಯಲ್ಲಿ ಕೆಂಪುವರ್ಣದಲ್ಲಿ ಹಲವು ಚಿತ್ರಗಳನ್ನು ಬಿಡಿಸಲಾಗಿದೆ.

3000 ವರ್ಷಗಳ ಹಿಂದಿನ ಶಿಲಾ ತಾಮ್ರಯುಗಕ್ಕೆ ಸೇರಿದ ವರ್ಣ ಚಿತ್ರಗಳಾಗಿವೆ. ಯುವಕರಾದ ಮಂಜುನಾಥ ದೊಡ್ಮನಿ, ಚಂದ್ರಶೇಖರ್ ಕುಂಬಾರ, ನಾಗರಾಜ್ ಶಿವಪುರ ನೇತೃತ್ವದಲ್ಲಿ ವರ್ಣಚಿತ್ರ ಮತ್ತು ಶಾಸನವನ್ನು ಸಂಶೋಧಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net