ದುಬಾರಿಯಾದ ಎಳನೀರು, ಕಲ್ಲಂಗಡಿ

Untitled design 17
ಗಂಗಾವತಿಯಲ್ಲಿ ಮಣ್ಣಿನ ಸಲಕರಣೆಗಳಿಗೆ ಬೇಡಿಕೆ ಹೆಚ್ಚಾಗಿದ್ದು,ಸಂತೆ ಬಯಲಿನಲ್ಲಿ ಮಾರಾಟಕ್ಕಿಡಲಾಗಿದೆ.
Published on

ಗಂಗಾವತಿ: ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿರ್ಜಲೀಕರಣ ಶಮನಕ್ಕಾಗಿ ಜನ ಎಳನೀರು ಮತ್ತು ಹಣ್ಣುಗಳಿಗೆ ಮೊರೆ ಹೋಗುವಂತಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಅತಿ ಹೆಚ್ಚಿನ ಪ್ರಮಾಣದ ಬಿಸಿಲಿನ ಪ್ರಖರತೆ ದಾಖಲಾಗಿದ್ದು, ಸರಾಸರಿ 42 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಬೆಳಗ್ಗೆ 10ರಿಂದಲೇ ಬಿಸಿಲು ಆರಂಭವಾಗಿದ್ದು, ಸಂಜೆ 6ಗಂಟೆಯಾದರೂ ಬಿಸಿಲಿನ ತಾಪ ಕಡಿಮೆಯಾಗುತ್ತಿಲ್ಲ. ರಸ್ತೆ ಬದಿಯಲ್ಲಿ ಮರಗಳ ಸಂಖ್ಯೆ ಕ್ಷೀಣಿಸಿದ್ದರಿಂದ ತಂಪಿನ ಅನುಭವ ಸಿಗುತ್ತಿಲ್ಲ. ಸುಡುವ ಡಾಂಬರ್ ರಸ್ತೆಯಿಂದಲೂ ಬೆಂಕಿಝಳ ಬಡಿಯುತ್ತಿದ್ದು, ನಿರ್ಜಲೀಕರಣ ಪ್ರಮಾಣ ಹೆಚ್ಚಾಗುತ್ತಿದೆ. ಬಿಸಿಲಿನ ಝಳ ನಿಯಂತ್ರಣಕ್ಕಾಗಿ ಜನರು ಎಳನೀರು ಮತ್ತು ಕಲ್ಲಂಗಡಿ ಅವಲಂಬಿಸಿದ್ದು, ತಕ್ಕ ಮಟ್ಟಿಗೆ ನಿಯಂತ್ರಿಸಿಕೊಳ್ಳುತ್ತಿದ್ದಾರೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ವಾಂತಿಭೇದಿ ಪ್ರಕರಣ ಹೆಚ್ಚುತ್ತಿವೆ.

ಎಳನೀರು 50 ರೂ.ಗೆ ಮಾರಾಟ: ಎಳನೀರು ದುಬಾರಿಯಾಗಿದೆ. 25 ರೂ.ಗಳಿಗೆ ಮಾರಾಟವಾಗುತ್ತಿದ್ದ ಎಳನೀರು 50 ರೂ. ಗಡಿದಾಟಿದೆ. ನೀರಿನ ಪ್ರಮಾಣ ಕಡಿಮೆ ಹಿನ್ನೆಲೆಯಲ್ಲಿ ಸ್ಥಳೀಯ ಎಳನೀರು ಖರೀದಿಸಲು ಮಾರಾಟಗಾರರು ಒಪ್ಪುತ್ತಿಲ್ಲ. ಹೀಗಾಗಿ ಮಂಡ್ಯ, ಮದ್ದೂರಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಿತ್ಯ ಸರಾಸರಿ 10 ಲಾರಿ ಎಳನೀರು ಕಾಯಿ ನಗರಕ್ಕೆ ಬರುತ್ತಿವೆ. ಪ್ರಮುಖ ವೃತ್ತಗಳಲ್ಲಿ ಎಳನೀರು ಮಾರಾಟದ್ದೆ ಅಬ್ಬರ. ಅದರೊಂದಿಗೆ ಕಲ್ಲಂಗಡಿಗೂ ಡಿಮಾಂಡ್ ಹೆಚ್ಚಿದ್ದು, ಕೆಜಿಗೆ 30ರೂ.ಗೆ ಮಾರಾಟವಾಗುತ್ತಿದ್ದ ಕಲ್ಲಂಗಡಿ 60ರೂ.ಗಳಿಗೆ ಹೆಚ್ಚಿದೆ. 10 ರೂ.ಪ್ಲೇಟ್ ಸಿಗುತ್ತಿದ್ದ ಕಲ್ಲಂಗಡಿ ಬೇಡಿಕೆ ಹಿನ್ನೆಲೆಯಲ್ಲಿ 20 ರೂ. ನಿಗದಿಪಡಿಸಲಾಗಿದೆ. ಮಜ್ಜಿಗೆ, ಲಸ್ಸಿಗೂ ಶುಕ್ರದೆಸೆ ಶುರುವಾಗಿದೆ. ಮಣ್ಣಿನ ಮಡಕೆಯಲ್ಲಿ ತಯಾರಿಸಿದ ಮಜ್ಜಿಗೆ ಮತ್ತು ಲಸ್ಸಿಗೆ ಬೇಡಿಕೆ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net