

ಗಂಗಾವತಿ: ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಕರು ಕಲಿಸಲು ಆದ್ಯತೆ ನೀಡಬೇಕಿದ್ದು, ಪ್ರತಿಭೆ ಗುರುತಿಸಬೇಕಿದೆ ಎಂದು ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.
ನಗರದ ಕಲ್ಮಠದ ಡಿ-ಇಡಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯ ಡಿ-ಇಡಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಎನ್ನೆಸ್ಸೆಸ್ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಶ್ರಮ ಸಾಕಷ್ಟಿದ್ದು, ಪಠ್ಯ ಬೋಧನೆ ಜತೆಗೆ ನೈತಿಕ ಶಿಕ್ಷಣ ನೀಡಬೇಕಿದೆ. ಶಿಕ್ಷಣದ ಮಾಲ್ಯಗಳನ್ನು ತಿಳಿಸುವ ಜವಾಬ್ದಾರಿಯಿದ್ದು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಜವಳಗೇರಾ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಡಾ.ನಾರಾಯಣ ಕಂದಗಲ್ ಮಾತನಾಡಿ, ಮಕ್ಕಳ ಕಲಿಕೆ ಅನುಗುಣ ಬೋಧನಾ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾಲೇಜಿನಲ್ಲಿ ಓದಿ ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾದ ಮಲ್ಲಪ್ಪ ಮತ್ತು ಪಲ್ಲವಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಶರಣಬಸಯ್ಯ ಹಿರೇಮಠ, ಎಚ್‌ಆರ್ ಸರೋಜಮ್ಮ ಪಿಯು ಕಾಲೇಜು ಪ್ರಾಚಾರ್ಯ ಡಾ.ಎನ್.ರವಿ ಚವ್ಹಾಣ ಇತರರಿದ್ದರು.