

ಗಂಗಾವತಿ: ಲೆಕ್ಕ ಪರಿಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿದ್ದು, ಸ್ವಯಂ ವೃತ್ತಿ ಕೈಗೊಳ್ಳಲು ಪೂರಕವಾಗಿದೆ ಎಂದು ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.
ನಗರದ ಜಿಎಚ್‌ಎನ್ ವಾಣಿಜ್ಯ ಪದವಿ ಕಾಲೇಜಿನಲ್ಲಿ ಶ್ರೀಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಮತ್ತು ಹುಬ್ಬಳ್ಳಿಯ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಾಗತೀಕರಣ ಮತ್ತು ಖಾಸಗೀಕರಣದಿಂದ ವಾಣಿಜ್ಯ ವಹಿವಾಟುಗಳು ವೇಗದಿಂದ ಸಾಗುತ್ತಿದ್ದು, ಜಗತ್ತು ಮುಕ್ತ ಮಾರುಕಟ್ಟೆಯಾಗಿದೆ. ಹಣಕಾಸು ನಿರ್ವಹಣೆಗೆ ಸಿಎ ಅಧ್ಯಯನ ಪರಿಣಾಮಕಾರಿಯಾಗಿದ್ದು, ವ್ಯವಹಾರದ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಪೂರಕವಾಗಿದೆ ಎಂದರು.
ರಾಣೆಬೆನ್ನೂರ ವಾಣಿಜ್ಯ ಪದವಿ ಕಾಲೇಜಿನ ಪ್ರಾಧ್ಯಾಪಕ ಸಿ.ಬಿ.ಕೋರಿ ಮಾತನಾಡಿ, ಸಂಪಾದಿಸಿದ ಹಣವನ್ನು ಲೆಕ್ಕಪರಿಶೋಧಕರ ಸಲಹೆಯಂತೆ ನಿರ್ವಹಿಸಿದರೆ ಆದಾಯ ಇಲಾಖೆಯಿಂದ ಯಾವುದೇ ತೊಂದರೆಯಾಗಲ್ಲ ಎಂದರು. ಸಂಪನ್ಮೂಲ ವ್ಯಕ್ತಿಯ ಹುಬ್ಬಳ್ಳಿಯ ಶಿವಕುಮಾರ ಹಾದಿಮನಿ, ಅಮಿತ್ ಬಾಬ್ಜಿ, ನಟರಾಜ್ ಮೂರಶಿಳ್ಳೆ ತರಬೇತಿ ನೀಡಿದರು.
ಮಾಜಿ ಸಂಸದ ಎಸ್.ಶಿವರಾಮನಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಗುಂಜಳ್ಳಿ ರಾಜಶೇಖರಪ್ಪ, ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಪ್ರೊ.ಜಿ.ಬಸವರಾಜ್ ಅಯೋಧ್ಯಾ, ಡಾ.ಶರಣಬಸಪ್ಪ ಕೋಲ್ಕಾರ್, ವೀರೇಶ ಯಾವಗಲ್, ಡಾ.ಎನ್.ರವಿ ಚವ್ಹಾಣ್ ಇತರರಿದ್ದರು. ಕಾರ್ಯಾಗಾರದಲ್ಲಿ ಜಿಎಚ್‌ಎನ್, ಕೆಸಿಎಸ್ ಮಹಿಳಾ ಪದವಿ ಕಾಲೇಜು, ಎಚ್.ಆರ್.ಸರೋಜಮ್ಮ ಪಿಯು ಮತ್ತು ಕೊಟ್ಟೂರೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.