

ಗಂಗಾವತಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಇಸ್ಪೀಟ್ ಆಟ ಮತ್ತು ಮೀಟರ್ ಬಡ್ಡಿ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಬಣದ ಸದಸ್ಯರು ನಗರದ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್‌ಗೆ ಗುರುವಾರ ಮನವಿ ಸಲ್ಲಿಸಿದರು.
ದಲಿತಪರ ಸಂಘಟನೆ ಸದಸ್ಯರೊಂದಿಗೆ ತೆರಳಿ, ಡಿವೈಎಸ್ಪಿಯೊಂದಿಗೆ ಚರ್ಚಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಅಜಯಕುಮಾರ ಛಲವಾದಿ ಮಾತನಾಡಿ, ಎಲ್ಲೆಂದರಲ್ಲಿ ಇಸ್ಪೀಟ್ ಅಡ್ಡೆಗಳಿದ್ದು, ಯಾವದಕ್ಕೂ ಪರವಾನಗಿಯಿಲ್ಲ. ಪರವಾನಗಿ ಪಡೆದ ಕ್ಲಬ್‌ಗಳಲ್ಲೂ ನಿಷೇಧಿತ ಅಂದರ್ ಬಾಹರ್ ಆಟ ಆಡಿಸಲಾಗುತ್ತಿದ್ದು, ಯುವಕರು ಹಾಳಾಗುತ್ತಿದ್ದಾರೆ.
ಅದರೊಂದಿಗೆ ಮೀಟರ್ ಬಡ್ಡಿ ನೀಡುವವರ ಸಂಖ್ಯೆ ಹೆಚ್ಚಾಗಿದ್ದು, ಸಾಲಪಡೆದ ಕುಟುಂಬ ಸದಸ್ಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಇಸ್ಪೀಟ್ ಮತ್ತು ಮೀಟರ್ ಬಡ್ಡಿ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಸುರೇಶ ಮಾಳಿಮನಿ, ದೇವಣ್ಣ ಐಹೊಳೆ, ಗಂಗಣ್ಣ ಸಿದ್ದಾಪುರ ಇತರರಿದ್ದರು.