ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ವಿರೋಧ

SABHE
ಗಂಗಾವತಿ ಸಿಪಿಐ(ಎಂ) ಕಚೇರಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ ಶನಿವಾರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಣಕಲ್, ತಾಲೂಕು ಕಾರ್ಯದರ್ಶಿ ಶ್ರೀನಿವಾಸ ಹೊಸಳ್ಳಿ ಇತರರಿದ್ದರು.
Published on

ಗಂಗಾವತಿ: ನೀರಾವರಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಯ ಸರ್ಕಾರದ ನಿರ್ಧಾರ ಖಂಡನೀಯವಾಗಿದ್ದು, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು.ಬಸವರಾಜ ಹೇಳಿದರು.

ನಗರದ ಸಿಪಿಐ(ಎಂ) ಕಚೇರಿಯಲ್ಲಿ ಸಂಘದ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟದ ಸರ್ಕಾರ ವಿದ್ಯುತ್ ಉತ್ಪಾದನೆ ಕ್ಷೇತ್ರವನ್ನು ಖಾಸಗೀಕರಣಗೊಳಿಸುತ್ತಿದ್ದು, ರಾಜ್ಯ ಸರ್ಕಾರವೂ ಸ್ಮಾರ್ಟ್ ಮೀಟರ್ ಅಳವಡಿಕೆ ಮೂಲಕ ಬೆಂಬಲಿಸುತ್ತಿರುವುದು ಜನವಿರೋಧಿ ನೀತಿಯಾಗಿದೆ.

ಕಾಯ್ದೆ ಜಾರಿ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ 1.40 ಕೋಟಿ ಬಿಪಿಎಲ್ ಕಾರ್ಡುದಾರರ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಲಾನುಭವಿಗಳ ಮನೆಗಳು ಕತ್ತಲೆಯಾಗಲಿವೆ. ಸಹಾಯಧನ ಆಧಾರದ 14 ಲಕ್ಷ ಕಾರ್ಮಿಕ ಕುಟಂಬಗಳಿಗೆ ಅನ್ಯಾಯವಾಗಲಿದ್ದು, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳು ವಿದ್ಯುತ್ ಬಿಲ್ ಹೊರೆ ತಡೆಯಲಾಗದೆ ಮುಚ್ಚಿ ಹೋಗಲಿವೆ ಎಂದರು.

ಕರಾಳ ಕಾಯ್ದೆ ರಾಜ್ಯದಲ್ಲಿ ಜಾರಿಗೆ ತರುವುದಿಲ್ಲವೆಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಬೇಕಿದ್ದು, ನಿರ್ಲಕ್ಷಿಸಿದರೆ ಹೋರಾಟ ನಡೆಸಲಾಗುವುದು ಎಂದರು.

ಸಂಘದ ಹೋರಾಟದ ರೂಪುರೇಷೆ, ಸಂಘಟನೆ ಮತ್ತು ಜನಜಾಗೃತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಣಕಲ್, ತಾಲೂಕು ಕಾರ್ಯದರ್ಶಿ ಶ್ರೀನಿವಾಸ ಹೊಸಳ್ಳಿ, ಪದಾಧಿಕಾರಿಗಳಾದ ಗಾದೆಪ್ಪ ಬೆಣಕಲ್, ನಿಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net