

ಗಂಗಾವತಿ: ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳು ಕಂಡು ಬಂದರೆ ಚುನಾವಣೆ ಆಯೋಗದ ಆದೇಶದಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಎಚ್ಚರಿಸಿದರು.
ನಗರದ ತಾಲೂಕಾಡಳಿತ ಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ಮಾದರಿ ಚುನಾವಣೆ ನೀತಿ ಸಂಹಿತೆ ಕುರಿತು ರಾಜಕೀಯ ಪಕ್ಷಗಳ ಮುಖಂಡರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ನಗರಸಭೆ ಮತ್ತು ಗ್ರಾಪಂ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಪರವಾನಗಿ ಪಡೆದು ಪ್ರಚಾರದ ್ಲೆಕ್ಸ್‌ಗಳನ್ನು ಹಾಕಬೇಕು. ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲಿಸಲಾಗುವುದು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಪ್ರಚೋದನಕಾರಿ ಚಟುವಟಿಕೆಗಳಿಗೆ ಅವಕಾಶವಿಲ್ಲ. ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ 1.97 ಲಕ್ಷ ಮತದಾರರಿದ್ದು, ಹಕ್ಕು ಚಲಾವಣೆಗೆ 235 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ. ಹಣ, ಮದ್ಯ ಮತ್ತು ಉಚಿತ ಕಾಣಿಕೆಗಳ ಹಂಚುವುದು ನಿಷೇಧಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಸಭೆ ಆಯೋಜಿಸುವ ಮೊದಲು ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆಯಬೇಕು ಎಂದು ಸೂಚನೆ ನೀಡಿದರು.
ಡಿವೈಎಸ್ಪಿ ಎಚ್.ಶೇಖರಪ್ಪ ಮಾತನಾಡಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಿದ್ದು, ರಾಜಕೀಯ ಪಕ್ಷಗಳ ಪ್ರತಿ ಚಟುವಟಿಕೆ ಸೆರೆ ಹಿಡಿಯಲಾಗುತ್ತಿದೆ ಎಂದರು.
ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಮಹಾಂತಗೌಡ ಪಾಟೀಲ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ನಗರ ಪಿಐ ಅಡಿವೇಶ ಗುದಿಗೊಪ್ಪ, ಗ್ರಾಮೀಣ ಪಿಐ ಎನ್.ಮಂಜುನಾಥ, ಕಾಂಗ್ರೆಸ್ ಪ್ರತಿನಿಧಿ ಶಾಮೀದ್ ಮನಿಯಾರ್, ಬಿಜೆಪಿಯ ಕಾಶಿನಾಥ ಚಿತ್ರಗಾರ, ಜೆಡಿಎಸ್ ಶೇಖ್ ನಬೀಸಾಬ್, ಕೆಆರ್‌ಪಿಪಿ ವೀರೇಶ ಬಲ್ಕುಂದಿ, ಎಎಪಿ ಎಸ್.ಎಂ.ಸಜ್ಜಿಹೊಲ ಇತರರಿದ್ದರು.