ನರೇಗಾ ಕಾರ್ಮಿಕರ ಮೇಲೆ ಜೇನು ದಾಳಿ

gangavathi jenu dali
Published on

ಗಂಗಾವತಿ: ತಾಲೂಕಿನ ಹೊಸಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಜೇನ್ನೊಣಗಳು ಮಂಗಳವಾರ ದಾಳಿ ಮಾಡಿದ್ದು, ಮೂವರಿಗೆ ತೀವ್ರ ಗಾಯವಾಗಿದೆ.

ಹೊಸಳ್ಳಿಯ ಬಾಷಾಸಾಬ್, ಮಹ್ಮದ್ ಸಾಬ್, ಭೀಮೇಶ ಕಮ್ಮಾರ್ ಗಾಯಗೊಂಡಿದ್ದು, ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹೊಸಳ್ಳಿಯ ಕೃಷಿ ಭೂಮಿಯ ಬಸಿ ಕಾಲುವೆಯಲ್ಲಿ ಕಣಿವೆ ಸರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಮಧ್ಯಾಹ್ನದ ವೇಳೆ ಜೇನ್ನೊಣಗಳು ದಾಳಿ ನಡೆಸಿದ್ದರಿಂದ ಕೂಲಿಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು. ಗಾಯಗೊಂಡವರನ್ನು ಕೂಡಲೇ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ತಾಪಂ ಇಒ ಮಹಾಂತಗೌಡ ಪಾಟೀಲ್ ಮಾತನಾಡಿ, ಕಾಮಗಾರಿ ನಿರ್ವಹಿಸುವ ವೇಳೆ ಆಕಸ್ಮಿಕ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಹಾನಿಯಾಗಿಲ್ಲ. ಕೂಲಿಕಾರರ ಚಿಕಿತ್ಸಾ ವೆಚ್ಚವನ್ನು ನರೇಗಾ ಯೋಜನೆಯಡಿ ಪಾವತಿಸಲಾಗುವುದು. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದರು. ಪಿಡಿಒ ಬಸವರಾಜ, ಕಾಯಕಬಂಧುಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net