ಅಂಜನಾದ್ರಿ ಬೆಟ್ಟದಲ್ಲಿ ರಾಜಸ್ಥಾನ ಮಹಿಳೆ ಅಸ್ವಸ್ಥ, ಚಿಕಿತ್ಸೆ ಬಳಿಕ ಚೇತರಿಕೆ

Rajasthan woman sick
ಗಂಗಾವತಿ ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಅಸ್ವಸ್ಥಗೊಂಡ ರಾಜಸ್ಥಾನದ ಮಹಿಳೆ ಸುಮಿತ್ರಾನಂದನ್‌ರನ್ನು ಬೆಟ್ಟದ ಮೇಲಿಂದ ಕೆಳಗೆ ಕೊಂಡಯುತ್ತಿರುವ ದೇವಾಲಯ ಸಿಬ್ಬಂದಿ.
Published on

ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಅಸ್ವಸ್ಥಗೊಂಡ ರಾಜಸ್ಥಾನದ ಮಹಿಳೆಗೆ ದೇವಾಲಯ ಸಿಬ್ಬಂದಿ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಹಂಪಿ ವೀಕ್ಷಣೆಗಾಗಿ ರಾಜಸ್ಥಾನದ ಜೋಧಪುರ ತಂಡದೊಂದಿಗೆ ಬಂದಿದ್ದ ಸುಮಿತ್ರಾನಂದನ್, ಉಪವಾಸ ವ್ರತದೊಂದಿಗೆ ಆಂಜನೇಯನ ದರ್ಶನಕ್ಕಾಗಿ ಬೆಟ್ಟ ಹತ್ತಿದ್ದು, ದೇವಾಲಯ ಸಮೀಪಿಸುತ್ತಿದ್ದಂತೆ ಅಸ್ವಸ್ಥಗೊಂಡಿದ್ದಾರೆ. ರಕ್ಷಣಾ ಕರ್ತವದಲ್ಲಿದ್ದ ಪ್ರವಾಸಿ ಮಿತ್ರರು, ದೇವಾಲಯ ಸಮಿತಿ ಮತ್ತು ಪೊಲೀಸರು ಮಹಿಳೆಯನ್ನು ಸ್ಟ್ರಚರ್ ಮೂಲಕ ಬೆಟ್ಟದ ಹಿಂದಿನ ಚಿಕ್ಕರಾಂಪುರ ವೇದಪಾಠಶಾಲೆ ಮೆಟ್ಟಿಲುಗಳ ಮೂಲಕ ಕೆಳಗೆ ಕರೆತಂದು ಆಂಬುಲೇನ್ಸ್‌ನಲ್ಲಿ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ತಜ್ಞವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ.

ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದಲ್ಲಿ ಏರುಪೇರಾಗಿದ್ದರಿಂದಲೇ ಅಸ್ವಸ್ಥಗೊಂಡಿದ್ದು, ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ದೇವಾಲಯ ಸಿಬ್ಬಂದಿ ಬಸವರಾಜ ತಿಳಿಸಿದ್ದಾರೆ. ಈಚೆಗೆ ಜರುಗಿದ ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಸ್ಟ್ರಚರ್‌ಗಳನ್ನು ಬೆಟ್ಟದ ಮೇಲಿಟ್ಟಿದ್ದು, ಅದೇ ಮಹಿಳೆ ರಕ್ಷಣೆಗೆ ನೆರವಾಗಿದ್ದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net