

ಗಂಗಾವತಿ: ತಾಲೂಕಿನ ಹಿರೇಬೆಣಕಲ್ ವ್ಯಾಪ್ತಿಯಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪನೆ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕು ಆಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ, ಚಿಕ್ಕಬೆಣಕಲ್, ಹಿರೇಬೆಣಕಲ್ ವ್ಯಾಪ್ತಿಯ ಗ್ರಾಮಸ್ಥರೊಂದಿಗೆ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಣ್ಣ ಬೆಣಕಲ್ ಮಾತನಾಡಿ, ತಾಲೂಕಿನಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧವಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕಾಯ್ದಿಟ್ಟ ಅರಣ್ಯ ಪ್ರದೇಶದ ಜತೆಗೆ ಐತಿಹಾಸಿಕ ಸ್ಮಾರಕಗಳು ಮತ್ತು ಪರಂಪರೆಯ ಕುರುಹುಗಳು ನಾಶವಾಗಲಿವೆ. ಯಾವುದೇ ಕಾರಣಕ್ಕೂ ಯೋಜನೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಬಸವರಾಜ ಮರಕುಂಬಿ, ಹುಸನೇಪ್ಪ, ಮಂಜುನಾಥ ಡಗ್ಗಿ, ಮುತ್ತಣ್ಣ ದಾಸನಾಳ, ದುರಗಪ್ಪ, ಹನುಮೇಶ ಬೆಣಕಲ್, ಅಮಿನಾ ಬೇಗಂ, ದುರಗಮ್ಮ, ಮುದಕಮ್ಮ, ಅಮರೇಶ ಕಡಗದ್ ಇತರರಿದ್ದರು.
ಗ್ರಾಮಗಳೊಂದಿಗೆ ಜನಾಂದೋಲನ: ತಾಲೂಕಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಅಣುವಿದ್ಯುತ್ ಸ್ಥಾವರದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ವಿರೋಧಿಸುವಂತೆ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು. ಕಲ್ಮಠದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಹಿರೇಬೆಣಕಲ್, ಚಿಕ್ಕಬೆಣಕಲ್ ವ್ಯಾಪ್ತಿಯಲ್ಲಿ ಲವತ್ತಾದ ಕೃಷಿಭೂಮಿಯಿದ್ದು, ವಿದ್ಯುತ್ ಸ್ಥಾವರದಿಂದ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಅದರಂತೆ ಪುರಾಣ ಪ್ರಸಿದ್ಧವಾದ ಕಿಷ್ಕಿಂಧಾ ಕ್ಷೇತ್ರವಿದ್ದು, ವಿಜಯನಗರ ಸಾಮ್ರಾಜ್ಯದಲ್ಲಿ ಸ್ಮಾರಕಗಳಿವೆ. 3ಸಾವಿರ ವರ್ಷಗಳಷ್ಟು ಹಳೆಯದಾದ ಮತ್ತು ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆಯಾಗಲಿರುವ ಮೋರೆರ ಬೆಟ್ಟವೂ ಕೂಗಳತೆಯಲ್ಲಿದೆ. ಯೋಜನೆ ಕೈಬಿಡದಿದ್ದರೆ ಗ್ರಾಮಗಳೊಂದಿಗೆ ಜನಾಂದೋಲನ ರೂಪಿಸಲಾಗುವುದು ಎಂದರು.