

ಗಂಗಾವತಿ: ಮನೆಗೊಂದು ಮರ ಅಭಿಯಾನದಡಿ ಪರಿಸರ ರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು, ಮನೆಗಳ ಮುಂದೆ ಸಸಿಗಳನ್ನು ಬೆಳೆಸುವ ಗುರಿಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಹೇಳಿದರು.
ತಾಲೂಕಿನ ಹೇಮಗುಡ್ಡದ ಶ್ರೀದುರ್ಗಾಪರಮೇಶ್ವರಿ ದೇವಾಲಯ ವ್ಯಾಪ್ತಿಯಲ್ಲಿ ಚಿಕ್ಕಬೆಣಕಲ್ ಗ್ರಾಪಂಯಿಂದ ವಿಶ್ವಪರಿಸರ ದಿನ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಮಾತನಾಡಿದರು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ನಶಿಸುತ್ತಿರುವ ಪರಿಸರದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ಮಳೆಗಾಲದಲ್ಲಿ ರೈತರು ಹೊಲದ ಬದುವಿನಲ್ಲಿ ಸಸಿನೆಟ್ಟು, ಪೋಷಿಸಬೇಕು. ಮಕ್ಕಳಲ್ಲಿ ಪಾಲಕರು ಪರಿಸರ ಪ್ರಜ್ಞೆ ಬೆಳೆಸಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷ ಶಿವಮೂರ್ತಿ ಗೊಲ್ಲರ್, ಉಪಾಧ್ಯಕ್ಷ ಲಿಂಗಪ್ಪ ಭೋವಿ, ಪಿಡಿಒ ಇಂದಿರಾ, ಕಾರ್ಯದರ್ಶಿ ಭೀಮಪ್ಪ ನಾಯಕ, ಜಿಲ್ಲಾ ಸಮಾಲೋಚಕ ರಾಮಣ್ಣ ಇದ್ದರು.
ನಗರದ ಶ್ರೀ ಕೆಂಧೋಳೆ ರಾಮಣ್ಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಪರಿಸರ ರಕ್ಷಣೆ ಸಹಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶ್ರೀನಿವಾಸ ಕಲ್ಯಾಣಿ ಮಾತನಾಡಿ, ಮಿತಿ ಮೀರುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಪರಿಸರ ರಕ್ಷಣೆಯೊಂದೆ ದಾರಿ ಎಂದರು. ಸ್ಕೌಟ್ ಮತ್ತು ಗೈಡ್ಸ್ ಪ್ರಶಿಕ್ಷಣಾರ್ಥಿಗಳು ಮರಗಳ ಪೋಷಣೆಗೆ ದತ್ತು ಪಡೆದರು. ಸಂಸ್ಥೆ ಸದಸ್ಯ ಯಶವಂತಕುಮಾರ, ಮುಖ್ಯಶಿಕ್ಷಕ ವೆಂಕಟೇಶ ದೇಸಾಯಿ, ಶಿಕ್ಷಕರಾದ ಕವಿತಾ, ಶಂಕರ್, ಸಾಯೆರಾಭಾನು ಇತರರಿದ್ದರು.