

ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಪಡೆಯಲು 371ಜೆ ವಿಧೇಯಕ ಪೂರಕವಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಹೊಸ ಬಂಡಿಹರ್ಲಾಪುರ ಸರ್ಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ ಹೊಸ್ಮನಿ ಹೇಳಿದರು.
ನಗರದ ಬಾಲಕಿಯರ ಸ.ಹಿ.ಪ್ರಾ. ಶಾಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ 371ಜೆ ವಿಧೇಯಕ ಸಾಧಕ, ಬಾಧಕ, ಆರೋಗ್ಯ ಮತ್ತು ಪರಿಸರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಹೋರಾಟದ ಲದಿಂದ 371ಜೆ ವಿಧೇಯಕ ಪಡೆದುಕೊಂಡಿದ್ದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ. ವಿಧೇಯಕ ಜಾರಿಯಿಂದ ಸರ್ಕಾರಿ ಉದ್ಯೋಗಸ್ಥರ ಸಂಖ್ಯೆ ಹೆಚ್ಚಾಗಿದ್ದು, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಗಣನೀಯ ರೀತಿಯಲ್ಲಿ ಏರಿಕೆಯಾಗಿದೆ. ಜಾರಿಯಾಗಿ 10ವರ್ಷ ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ತಲುಪಿಲ್ಲ. 371ಜೆ ವಿಧೇಯಕ ಪ್ರಮಾಣ ಪತ್ರ ಪಡೆಯಲು ಅಲೆದಾಡುವ ಸ್ಥಿತಿ ಬಂದಿದೆ. ವಿಧೇಯಕದ ಬಗ್ಗೆ ಸಂಪೂರ್ಣ ಅರಿತುಕೊಂಡಾಗ ಮಾತ್ರ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳನ್ನು ಪ್ರಶ್ನಿಸಬಹುದಾಗಿದೆ ಎಂದರು.
ಆರೋಗ್ಯ ಮತ್ತು ಪರಿಸರ ಕುರಿತು ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್ ಮಾತನಾಡಿ, ಸಾಕ್ಷರತೆ ಹೆಚ್ಚಾದಂತೆಲ್ಲ ಪರಿಸರ ಕಾಳಜಿ ಕಡಿಮೆಯಾಗುತ್ತಿದೆ. ಅತಿಯಾದ ದುರಾಸೆ ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ವಾಯು, ಭೂಮಿ, ಶಬ್ಧ, ಜಲ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಪ್ಲಾಸ್ಟಿಕ್ ಬ್ಯಾನ್ ಅಭಿಯಾನ ನಮ್ಮಿಂದಲೇ ಶುರುವಾಗಬೇಕಿದೆ ಎಂದರು.
ಸಮಿತಿಯಿಂದ ಹಮ್ಮಿಕೊಂಡಿದ್ದ ವಾಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು. ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಗರಸಭೆ ಸದಸ್ಯ ನವೀನ್ ಮಾ.ಪಾಟೀಲ್, ಸಂಕಲ್ಪ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ನಾಗರಾಜ ಗುತ್ತೇದಾರ್, ಶಿಕ್ಷಣ ಸಂಯೋಜಕ ರಾಘವೇಂದ್ರ, ಮುಖಂಡರಾದ ಶಂಭುಲಿಂಗ ದೊಡ್ಮನಿ, ಮಂಜುನಾಥ, ಹನುಮಂತಪ್ಪ ಐಹೊಳೆ, ಅಂಗನವಾಡಿ ಕಾರ್ಯಕರ್ತೆ ಗಿರಿಜಮ್ಮ ಇತರರಿದ್ದರು.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 371ಜೆ ವಿಧೇಯಕ ಬಗ್ಗೆ ಪೂರ್ಣ ಮಾಹಿತಿಯಿಲ್ಲ. ಇದರಿಂದ ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ವಿಚಾರ ಸಂಕಿರಣದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಬಸವರಾಜ ಮ್ಯಾಗಳಮನಿ
ಜಿಲ್ಲಾಧ್ಯಕ್ಷ, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ