

ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಡಿ.3ರಿಂದ ಆರಂಭವಾಗುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಹೇಳಿದರು.
ಆನೆಗೊಂದಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಬುಧವಾರ ಪರಿಶೀಲಿಸಿ ಮಾತನಾಡಿದರು. ಅಂಜನಾದ್ರಿ ಬೆಟ್ಟಕ್ಕೆ ಭಕ್ತರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ಹೊರ ಜಿಲ್ಲೆಗಳಿಂದ ಬರುವ ವಾಹನಗಳಿಗೆ ಗ್ರಾಮ ಹೊರವಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ, ವಿದ್ಯುತ್ ಮತ್ತು ಸೂಚನಾ ಲಕ ಹಾಕಲಾಗಿದೆ. ಬೆಟ್ಟದ ಮುಂಭಾಗದಲ್ಲಿ ಪೊಲೀಸ್ ಹೊರ ಠಾಣೆ ಆರಂಭಿಸಿದ್ದು, ಕಡೇಬಾಗಿಲು, ಆನೆಗೊಂದಿ ಕೃಷ್ಣದೇವಾಯ ವೃತ್ತ, ಪಂಪಾಸರೋವರ ಕ್ರಾಸ್, ಹನುಮನಹಳ್ಳಿ, ಚಿಕ್ಕರಾಂಪುರ ವೇದ ಪಾಠಶಾಲೆ ಭಾಗದಲ್ಲಿ ಸಹಾಯವಾಣಿ ಆರಂಭಿಸಲಾಗುವುದು. ಬುಕ್ಕಸಾಗರ ಕ್ರಾಸ್, ಕಡೇಬಾಗಿಲು ಸರ್ಕಲ್, ದುರ್ಗಾ ಪ್ಯಾರಾಡೈಸ್ ಕ್ರಾಸ್, ಸಣಾಪುರ ಗ್ರಾಪಂ ಕಚೇರಿ ಮತ್ತು ಶಿವಪುರ ಕ್ರಾಸ್‌ಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗುವುದು. ಪೊಲೀಸ್ ಸೇವೆಗಳಿಗಾಗಿ 08533-230854, 9480803730, 9480803721 ಸಂಪರ್ಕಿಸಬಹುದು ಎಂದರು.
ಪರಿಶೀಲನೆ: ವ್ಯವಸ್ಥೆ ಕುರಿತು ಶಾಸಕ ಪರಣ್ಣ ಮುನವಳ್ಳಿ ಮತ್ತು ಎಸಿ ಬಸಣ್ಣೆಪ್ಪ ಕಲ್ಲಶೆಟ್ಟಿ ನೇತೃತ್ವದ ಅಧಿಕಾರಿಗಳ ತಂಡ, ಅಂಜನಾದ್ರಿ ಬೆಟ್ಟ ಮತ್ತು ವೇದಪಾಠಶಾಲೆ ಬಳಿ ಪರಿಶೀಲನೆ ನಡೆಸಿತು. ಅನ್ಯಧರ್ಮಿಯರಿಗೆ ವ್ಯಾಪಾರ ವಹಿವಾಟು ನಿಷೇಧ ಕುರಿತು ಹಿಂದು ಪರ ಸಂಘಟನೆಗಳು ಹಾಕಿರುವ ್ಲೆಕ್ಸ್‌ಗಳನ್ನು ತೆರವುಗೊಳಿಸಲಾಯಿತು. ತಹಸೀಲ್ದಾರ್ ಯು.ನಾಗರಾಜ್ ಇತರರಿದ್ದರು.
ಫ್ಲೆಕ್ಸ್ ತೆರವು ಕ್ರಮ ಖಂಡನೀಯ: ಅಂಜನಾದ್ರಿಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ನಿಷೇಧದ ನಾಮಲಕ ತೆರವುಗೊಳಿಸಿರುವ ತಾಲೂಕು ಆಡಳಿತದ ಕ್ರಮವನ್ನು ಹಿಂದು ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಅಯ್ಯನಗೌಡ ಹೇರೂರು ಖಂಡಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಅವರು, ನಿಷೇಧ ಕುರಿತು ಡಿಸಿಗೆ ಮನವಿ ಮಾಡಿ ನಾಮಲಕ ಹಾಕಲಾಗಿತ್ತು. ಸಂಘಟನೆ ಗಮನಕ್ಕೆ ತರದೆ ತೆರವುಗೊಳಿಸಿರುವುದು ಖಂಡನೀಯ. ಹಿಂದು ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ನಿಯಮದಂತೆ ದೇವಸ್ಥಾನ ಸಮೀಪದ ಜಮೀನು, ಕಟ್ಟಡ, ನಿವೇಶನ ಸೇರಿ ಯಾವುದೇ ಸ್ವತ್ತನ್ನು ಹಿಂದುಗಳಲ್ಲದವರಿಗೆ ನೀಡಲು ಬರಲ್ಲ. ಅಂಜನಾದ್ರಿ ಬೆಟ್ಟ ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟಿದ್ದು, ಆಡಳಿತ ಮಂಡಳಿಯೇ ನಾಮಲಕ ಹಾಕಬೇಕಿತ್ತು ಎಂದಿದ್ದಾರೆ. ಶ್ರೀಕಾಂತ ಹೊಸಕೇರಿ, ಸಂಜೀವ ಜರಕುಂಟಿ, ಎನ್. ಹನುಮಂತರೆಡ್ಡಿ ಗುಡೂರು, ವೀರೇಶ ಬಿ. ಹಂಚಿನಾಳ ಸುದ್ದಿಗೋಷ್ಠಿಯಲ್ಲಿದ್ದರು.