

ಗಂಗಾವತಿ: ಗುರುಸಾರ್ವಭೌಮ ಭಕ್ತ ಮಂಡಳಿ ಮಂತ್ರಾಲಯಕ್ಕೆ ಕೈಗೊಂಡ ಪಾದಯಾತ್ರೆಗೆ ನಗರದ ಶ್ರೀ ಸುಂಕದ ಕಟ್ಟೆ ಪ್ರಾಣದೇವರ ದೇವಾಲಯ ಮುಂಭಾಗದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಮಂಡಳಿ 24 ವರ್ಷಗಳಿಂದ ನಗರದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಸಂಕೀರ್ತನೆ ಮೂಲಕ ರಾಯರ ದರ್ಶನ ಪಡೆಯಲಿದೆ. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆಗೆ ಚಾಲನೆ ನೀಡಿದ ಶ್ರೀ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ಗುರುರಾಜಾಚಾರ್ ಸಾಮವೇದ ಮಾತನಾಡಿ, ದೇವರ ಸ್ಮರಣೆ, ಉತ್ತಮ ಭಾವನೆಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿದ್ದು, ನಿರಂತರ ಭಜನೆ ಮತ್ತು ಸಂಕೀರ್ತನೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಪಾದಯಾತ್ರೆ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ನಗರಸಭೆ ಸದಸ್ಯ ವಾಸುದೇವ ನವಲಿ, ಪಾದಯಾತ್ರೆ ಮಂಡಳಿ ಅಧ್ಯಕ್ಷ ಶ್ರೀನಿವಾಸ ಕಾರಟಗಿ, ಮುಖಂಡರಾದ ಪ್ರಹ್ಲಾದರಾವ್‌ನವಲಿ, ನಾರಾಯಣರಾವ್ ವೈದ್ಯ, ಶ್ಯಾಮಸುಂದರ ಮುಕ್ತೇದಾರ್, ವಾಮನರಾವ್, ಜಗನ್ನಾಥ, ವೆಂಕಟೇಶ ಪುರೋಹಿತ್, ಸತೀಶ ಕುಲ್ಕರ್ಣಿ, ಗಿರೀಶ ಸಾಗರ, ಶ್ರೀನಿವಾಸ ಹೇರೂರು, ನಾರಾಯಣರಾವ್ ನವಲಿ, ಶ್ರೀಪಾದ್, ಮಧುಸೂದನ ಗುಡೂರು, ಸ್ವಾಮಿರಾವ್ ಹೇರೂರು ಇತರರಿದ್ದರು.