ಸ್ಮಶಾನ ಜಾಗ ವಿವಾದ ಇತ್ಯರ್ಥಪಡಿಸಿ: ಆನೆಗೊಂದಿ ಗ್ರಾಪಂ ವ್ಯಾಪ್ತಿ ಹಳ್ಳಿ ಜನರ ಆಗ್ರಹ

130922 People of Anegondi village protested by blocking road traffic
ಗಂಗಾವತಿ ತಾಲೂಕಿನ ಕಡೇಬಾಗಿಲು ವೃತ್ತದ ಬಳಿ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ಸೋಮವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
Published on

ಗಂಗಾವತಿ: ಸ್ಮಶಾನ ಜಾಗ ವಿವಾದ ಇತ್ಯರ್ಥ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ಸೋಮವಾರ ಕಡೇಬಾಗಿಲು ವೃತ್ತದ ಬಳಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಗ್ರಾಪಂ ಅಧ್ಯಕ್ಷ ಕೆ.ತಿಮ್ಮಪ್ಪ ಬಾಳಿಕಾಯಿ ಮಾತನಾಡಿ, ಆನೆಗೊಂದಿಯಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದ್ದು, ಸರ್ವೇ ನಡೆಸುವಲ್ಲಿ ಕಂದಾಯ ಅಧಿಕಾರಿಗಳು ವಿಲರಾಗಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಮಶಾನಕ್ಕಾಗಿ 1992ರಿಂದ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಸವನದುರ್ಗದ ಸರ್ಕಾರಿ ಭೂಮಿಯಲ್ಲಿ ನಿರಾಶ್ರಿತರಿಗೆ ವಸತಿ ಯೋಜನೆ ಕಲ್ಪಿಸುವಂತೆ 20 ವರ್ಷಗಳಿಂದ ಕೇಳುತ್ತಿದ್ದರೂ ಪ್ರಯೋಜನವಾಗಿಲ್ಲ. ಹಕ್ಕುಗಳನ್ನು ಪ್ರಶ್ನಿಸಿದರೆ ಗ್ರಾಮಲೆಕ್ಕಾಧಿಕಾರಿ ಸೇರಿ ಕಂದಾಯ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದು, ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಬಸವನದುರ್ಗ, ಕಡೇಬಾಗಿಲು ಮತ್ತು ಆನೆಗೊಂದಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಭೂಮಿ ನೀಡಬೇಕು. ಹಕ್ಕುಪತ್ರ ಗೊಂದಲ ಇತ್ಯರ್ಥಪಡಿಸಬೇಕು. 15 ದಿನದೊಳಗೆ ಸ್ಪಂದಿಸದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು. ಉಪತಹಸೀಲ್ದಾರ್ ಮಂಜುನಾಥ ನಂದನ್‌ಗೆ ಮನವಿ ಸಲ್ಲಿಸಿದರು.

ರಸ್ತೆ ಸಂಚಾರ ತಡೆಯಿಂದ ಹೊಸಪೇಟೆ, ಹುಲಿಗಿ ಮತ್ತು ಗಂಗಾವತಿ ಮಾರ್ಗದಲ್ಲಿ ಅಡಚಣೆ ಉಂಟಾಗಿ, ಪ್ರವಾಸಿಗರು ಪರದಾಡಿದರು. ಹೋರಾಟಕ್ಕೆ ಬೆಂಬಲಿಸಿ ಆಪ್ ತಾಲೂಕು ಅಧ್ಯಕ್ಷ ಎಸ್.ಎಂ.ಸಜ್ಜೆಹೊಲ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಡಿಸಿಸಿ ಮಾಜಿ ಅಧ್ಯಕ್ಷೆ ಲಲಿತಾರಾಣಿರಾಯಲು, ಗ್ರಾಪಂ ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಹುಲಿಗೆಮ್ಮ, ಕೆ.ವಿ.ಬಾಬು, ವಿಷ್ಣುತೀರ್ಥ ಜೋಶಿ, ಮಾಜಿ ಅಧ್ಯಕ್ಷ ಕೆ.ತಿರುಕಪ್ಪ, ವಿವಿಧ ಗ್ರಾಮಗಳ ಮುಖಂಡರಾದ ಲಿಂಗಪ್ಪ ಭೋವಿ, ಟಿ.ಜಿ.ಬಾಬು, ಭೋಗೇಶ, ನರಸಪ್ಪ, ಮರಿಸ್ವಾಮಿ ಇತರರಿದ್ದರು.

ಹೋರಾಟಕ್ಕೆ ಕಾರಣವೇನು?
ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಗ್ರಾಪಂ ಸದಸ್ಯೆ ಹುಲಿಗೆಮ್ಮ ನಾಯಕ ಪತಿ ಹೊನ್ನಪ್ಪ ನಾಯಕ ವಿರುದ್ಧ ವಿಎ ಮಹಾಲಕ್ಷ್ಮೀ ಪ್ರಕರಣ ದಾಖಲಿಸಿದ್ದೆ, ಹೋರಾಟಕ್ಕೆ ಕಾರಣ ಎನ್ನಲಾಗುತ್ತಿದೆ. ಪ್ರತಿಭಟನೆಯಲ್ಲಿ ಆನೆಗೊಂದಿ ವಿಷಯ ಮಾತ್ರ ಚರ್ಚಿಸಿ, ಬಸವನದುರ್ಗದ ವಿಚಾರ ಬೇಡ ಎಂದು ಕೆಲವರು ಒತ್ತಾಯಿಸಿದ್ದು ಗೊಂದಲಕ್ಕೆ ಕಾರಣವಾಯಿತು. ಸ್ಮಶಾನ ಜಾಗದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡಿದ್ದು, ಸರ್ವೇಗೆ ಸಮಸ್ಯೆಯಾಗಿದೆ. 2004ರಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿದ್ದರೂ, ಮತ್ತೆ ಭೂಮಿ ನೀಡುವಂತೆ ಒತ್ತಾಯಿಸಿರುವುದರ ಹಿಂದೆ ರಾಜಕೀಯವಿದೆ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೆಲ್ಲ ಕಂದಾಯ ಮತ್ತು ಗ್ರಾಪಂ ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net