

ಗಂಗಾವತಿ: ಧರ್ಮ ಜಾಗೃತಿಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ಪಾದಯಾತ್ರೆ ಕೈಗೊಂಡಿದ್ದು, ಎಲ್ಲ ಸಮುದಾಯಗಳಿಗೂ ಲಿಂಗಧಾರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಬನ್ನಿಗಿಡದ ಕ್ಯಾಂಪ್‌ನ ಶ್ರೀ ಚನ್ನಬಸವ ಕಲಾ ಮಂದಿರದಲ್ಲಿ ಶ್ರೀಶೈಲ ಜಗದ್ಗುರು ದ್ವಾದಶ ಪೀಠಾರೋಹಣ ಮತ್ತು ಜನ್ಮ ಸುವರ್ಣಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಧರ್ಮ ಜಾಗೃತಿಯಿಂದ ಶಾಂತಿ ಕಂಡುಕೊಳ್ಳಲು ಸಾಧ್ಯವಿದ್ದು, ಶ್ರೀಶೈಲ ಪೀಠಕ್ಕೆ ತ್ರೇತಾಯುಗದಿಂದಲೂ ಐತಿಹ್ಯಗಳಿವೆ. ಬೆಳಗಾವಿ ಜಿಲ್ಲೆ ಯಡೂರಿನಿಂದ ಶ್ರೀಶೈಲವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದು, ಪರಿಸರ ರಕ್ಷಣೆ ಜತೆಗೆ ಧರ್ಮ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಸಿಗಳನ್ನು ನೆಡುವುದು, ಜಾತ್ಯತೀತವಾಗಿ ಲಿಂಗಧಾರಣೆ, ಶ್ರೀಶೈಲದಲ್ಲಿ ಆಸ್ಪತ್ರೆ, ಯಾತ್ರಿ ನಿವಾಸ ನಿರ್ಮಾಣ, ಗುರುಕುಲ ಮಾದರಿ ವಸತಿ ಶಾಲೆ ಆರಂಭಿಸಲಾಗುವುದು. ಪಾದಯಾತ್ರೆ ಸಮಾರೋಪದ 2023ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಮಹಾ ಅಧಿವೇಶನ, ರಾಷ್ಟ್ರೀಯ ವೇದಾಂತ, ವಚನ ಸಮ್ಮೇಳನ, ವೀರಶೈವಾಗಮ ಸಮಾವೇಶ, ಸಾಮೂಹಿಕ ವಿವಾಹ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೀಠಾರೋಹಣ ಮತ್ತು ಜನ್ಮದಿನೋತ್ಸವ ಕಾರ್ಯಕ್ರಮ ನೆಪವಾಗಿದ್ದು, ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಶರಣರು ಮತ್ತು ಸಂತರು ನಡೆದಾಡಿದ ದೇಶದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ನಿರಂತರವಾಗಬೇಕಿದ್ದು, ಜಾತ್ಯತೀತವಾಗಿ ಪಾಲ್ಗೊಳ್ಳಬೇಕಿದೆ. ಕ್ಷೇತ್ರ ಪ್ರವೇಶಿಸುವ ಪಾದಯಾತ್ರೆ ತಂಡಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಜೈನಾಪುರ ಬೃಹನ್ಮಠದ ಶ್ರೀ ರೇಣುಕಾಶಿವಾಚಾರ್ಯರು ಮಾತನಾಡಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಅಂಬಿಕಾನಗರ ಪೀಠದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯರು, ಸುರಗೀಶ್ವರ ಮಠದ ಗುರುಸಿದ್ಧೇಶ್ವರ ಶಿವಾಚಾರ್ಯರು, ಅರಳಹಳ್ಳಿಯ ಗವಿಸಿದ್ದಯ್ಯಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಕೆಪಿಸಿಸಿ ಪ್ರಚಾರ ಸಮಿತಿ ಸಹ ಸಂಚಾಲಕ ಬಸವರಾಜ ಸ್ವಾಮಿ ಮಳೀಮಠ, ಬಿಜೆಪಿ ವಿಜಯನಗರ ಪ್ರಭಾರ ಸಿಂಗನಾಳ ವಿರೂಪಾಕ್ಷಪ್ಪ, ಸಮಿತಿ ಪದಾಧಿಕಾರಿಗಳಾದ ಶರಣಯ್ಯಸ್ವಾಮಿ ಮರಳೀಮಠ, ಆರ್.ದೇವಾನಂದ, ಸಂಗಯ್ಯಸ್ವಾಮಿ ಸಂಶಿಮಠ, ಮನೋಹರಗೌಡ ಹೇರೂರು, ಶಾಂತಮಲ್ಲಯ್ಯಸ್ವಾಮೀಜಿ ಇತರರಿದ್ದರು. ಉಪನ್ಯಾಸಕ ಸೋಮನಾಥಸ್ವಾಮಿ ಕುಲ್ಕರ್ಣಿ ನಿರ್ವಹಿಸಿದರು.