

ಗಂಗಾವತಿ: ಗ್ಯಾಸ್ ಸಿಲಿಂಡರ್ ಕಳವು ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಶನಿವಾರ ಬಂಧಿಸಿದ್ದಾರೆ.
ನಗರದ ಗುಂಡಮ್ಮಕ್ಯಾಂಪ್‌ನ ಚೇತನಕುಮಾರ, ಅಮರಭಗತ್ ಸಿಂಗ್ ನಗರದ ಸೋಹೆಲ್, ಲಕ್ಷ್ಮೀಕ್ಯಾಂಪ್‌ನ ಸಂಗಪ್ಪ, ರಾಜಧರಖಾನ್, ಶಶಿಧರ, ಅಂಬೇಡ್ಕರ್ ನಗರದ ದೇವಪುತ್ರ ಮತ್ತು ಅಗಡಿ ಸಂಗಣ್ಣ ಕ್ಯಾಂಪ್‌ನ ಕಾಸಿಂಅಲಿ ಬಂಧಿತರು. ಅವರಿಂದ 1.24 ಲಕ್ಷ ರೂ. ಮೌಲ್ಯದ 62 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂಗನವಾಡಿ, ಶಾಲೆಯಲ್ಲಿ ಬಿಸಿಯೂಟ ಕೋಣೆಯಿಂದ ಸಿಲಿಂಡರ್ ಕಳವಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪತ್ತೆಗಾಗಿ ಪಿಐ ಟಿ.ವೆಂಕಟಸ್ವಾಮಿ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಬೆಳಗ್ಗೆ ಮೆಕಾನಿಕ್, ಗಾರೆ ಕೆಲಸ ಮಾಡುತ್ತಿದ್ದ ಆರೋಪಿಗಳು ರಾತ್ರಿ ಸಿಲಿಂಡರ್‌ಗಳನ್ನು ಕದಿಯುತ್ತಿದ್ದರು. ನಿತ್ಯ ಮದ್ಯಸೇವನೆಗಾಗಿ ಹಣ ಹೊಂದಿಸಲು ಕಳ್ಳತನ ಮಾಡುತ್ತಿದ್ದರು. ಇವರೊಂದಿಗೆ ಇಬ್ಬರು ಅಪ್ರಾಪ್ತರಿದ್ದು, ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದೆ ಎಂದರು. ಪಿಐ ವೆಂಕಟಸ್ವಾಮಿ, ಪಿಎಸ್‌ಐಗಳಾದ ವಿಲಾಸ್ ಬೋಸ್ಲೆ, ಎಂ.ಎಸ್.ಕಾಮಣ್ಣ, ವೆಂಕಟೇಶ ಚವ್ಹಾಣ್ ಮತ್ತು ಪೇದೆಗಳಿದ್ದರು.