ಶಿಕ್ಷಣ-ಆರೋಗ್ಯ ಇಲಾಖೆಗಳ ಮಧ್ಯೆ ಸಮನ್ವಯ ಕೊರತೆ: ಜಿಪಂ ಸಿಎಒ ಅಮೀನ್ ಅತ್ತಾರ್ ಅಸಮಾಧಾನ

23092022 gangavati meeting
??????????
Published on

ಗಂಗಾವತಿ: ನಗರದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರಟಗಿ, ಗಂಗಾವತಿ ಮತ್ತು ಕನಕಗಿರಿ ತಾಪಂ ಸಾಮಾನ್ಯ ಸಭೆಗೆ ಅಸಮರ್ಪಕ ಮಾಹಿತಿಯೊಂದಿಗೆ ಆಗಮಿಸಿದ್ದ ಆರೋಗ್ಯ ಶಿಕ್ಷಣಾಧಿಕಾರಿಯನ್ನು ಜಿಪಂ ಮುಖ್ಯಲೆಕ್ಕಾಧಿಕಾರಿ ತರಾಟೆಗೆ ತೆಗೆದುಕೊಂಡರು.ಮಕ್ಕಳಿಗೆ ಲಸಿಕೆ ಹಾಕುವ ಗುರಿ ವಿಚಾರದಲ್ಲಿ ಸಮರ್ಪಕ ಮಾಹಿತಿ ನೀಡದ ಉಪವಿಭಾಗ ಆಸ್ಪತ್ರೆ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಪ್ರಸಾದ, ಕಡತಗಳನ್ನು ತರದೆ ಮೊಬೈಲ್ ನೋಡಿಕೊಂಡು ಹಳೆಯ ವಿವರ ಒಪ್ಪಿಸಲು ಮುಂದಾದರು. ಮಧ್ಯ ಪ್ರವೇಶಿಸಿದ ಜಿಪಂ ಮುಖ್ಯಲೆಕ್ಕಾಧಿಕಾರಿ (ಸಿಎಒ)ಅಮೀನ್ ಅತ್ತಾರ್, ಜೂನ್ ತಿಂಗಳ ಮಾಹಿತಿಯನ್ನೇ ಓದ ಬೇಡಿ. ನಿರೀಕ್ಷಿತ ಲಸಿಕೆ ಗುರಿ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನಡುವಿನ ಸಮನ್ವಯ ಕೊರತೆಯಿಂದ ಯೋಜನೆ ಅನುಷ್ಠಾನವಾಗುತ್ತಿಲ್ಲ ಎಂದ ಅವರು, ಮುಂದಿನ ಸಭೆಗೆ ಲಿಖಿತ ಹಾಗೂ ಸೂಕ್ತ ಮಾಹಿತಿಯೊಂದಿಗೆ ಬರುವಂತೆ ತಾಕೀತು ಮಾಡಿದರು.

ಜೂನ್‌ನಿಂದ ಬಾರದ ವೇತನ: ತ್ರಿವಳಿ ತಾಲೂಕಿನಲ್ಲಿ 769 ಅಡುಗೆದಾರರಿದ್ದು, ತಾಂತ್ರಿಕ ದೋಷದಿಂದ 140 ಮಂದಿಗೆ ಜೂನ್ ತಿಂಗಳಿಂದ ವೇತನ ಬಂದಿಲ್ಲ. ಸರಾಸರಿ 58,750 ವಿದ್ಯಾರ್ಥಿಗಳು ಬಿಸಿಯೂಟ ಪ್ರಯೋಜನ ಪಡೆಯುತ್ತಿದ್ದು, ಕೆಲವೆಡೆ ಅಡುಗೆ ಕೋಣೆ ನಿರ್ಮಿಸಬೇಕಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ಸುರೇಶ ಗೌಡ ತಿಳಿಸಿದರು.

ಕನಕಗಿರಿಯಲ್ಲಿ ಡಿಎಪಿ ಅಭಾವ: ಕನಕಗಿರಿ ಭಾಗದಲ್ಲಿ ಡಿಎಪಿ ಅಭಾವ ಇರುವುದು ಬಿಟ್ಟರೆ ಉಳಿದ ತಾಲೂಕುಗಳಲ್ಲಿ ರಸಗೊಬ್ಬರ ಕೊರತೆಯಿಲ್ಲ. ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಹೆಚ್ಚು 273 ಮಿಮೀ ಮಳೆಯಾಗಿದೆ. ಅತಿವೃಷ್ಟಿಯಿಂದ 20 ಹೆಕ್ಟೇರ್ ಭತ್ತ, 194 ಹೆಕ್ಟೇರ್ ದ್ವಿದಳ ಮತ್ತು ಎಣ್ಣೆ ಕಾಳು ಬೆಳೆ ಹಾನಿಯಾಗಿದ್ದು, ಸರ್ಕಾರಕ್ಕೆ ಸರ್ವೇ ವರದಿ ಸಲ್ಲಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಮಾಹಿತಿ ನೀಡಿದರು. ಕಳಪೆ ಬಿತ್ತನೆ ಬೀಜದಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಮಾರಾಟಗಾರರ ಮೇಲೆ ನಿಗಾವಹಿಸುವಂತೆ ತಾಪಂ ಇಒ ಮಹಾಂತಗೌಡ ಪಾಟೀಲ್ ಸೂಚನೆ ನೀಡಿದರು.

ಸಭೆಯಲ್ಲಿ ತೋಟಗಾರಿಕೆ, ರೇಷ್ಮೆ, ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ತಾಪಂ ಇಒಗಳಾದ ಚಂದ್ರಶೇಖರ್, ಡಾ.ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net