ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ

Ganesh festival
ಗಂಗಾವತಿಯಲ್ಲಿ ಬುಧವಾರ ಪ್ರತಿಷ್ಠಾಪನೆಗೂ ಮುನ್ನ ಗಣೇಶ ಮೂರ್ತಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರಿಸಲಾಯಿತು.
Published on

ಗಂಗಾವತಿ: ನಗರ ಮತ್ತು ತಾಲೂಕಿನಾದ್ಯಂತ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬುಧವಾರ 220ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಹಿಂದು ಮಹಾ ಮಂಡಳಿ, ವಿಜಯವೃಂದ ಯುವಕ ಸಂಘ, ಸ್ನೇಹ ವೃಂದ, ವೀರ ಮದಕರಿ ನಾಯಕ ಯುವಕ ಸಂಘ, ಆರ್ಯ ಈಡಿಗರ ಯುವಕರ ಸಂಘ, ದೈವಜ್ಞ ಬ್ರಾಹ್ಮಣ ಸಂಘ, ವೀರ ಕೇಸರಿ ಯುವಕರ ಸಂಘ ಮತ್ತು ಬಸಾಪಟ್ಟಣದ ಭಜರಂಗಿ ಬಾಯ್ಸ ಪ್ರಮುಖ ಪ್ರತಿಷ್ಠಾಪನೆ ಕೇಂದ್ರಗಳಾಗಿದ್ದು, ವಿಭಿನ್ನ ರೀತಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ಹಿಂದು ಮಹಾ ಮಂಡಳಿಯಲ್ಲಿ ತ್ರಿಕಾಲ ಪೂಜೆ ವ್ಯವಸ್ಥೆ ಮಾಡಲಾಗಿದ್ದು, ಮೂರ್ತಿಗೆ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಹಾಕಲಾಗಿದೆ. ಪ್ರತಿಷ್ಠಾಪನೆ ಮೊದಲು ಮೂರ್ತಿಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನೆರವೇರಿಸಲಾಯಿತು. ಮುಂಜಾಗ್ರತೆ ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆ ಕೇಂದ್ರ ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ.

ಪ್ರಮುಖ ಕೇಂದ್ರಗಳಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ಕಾಡಾ ಮಾಜಿ ಅಧ್ಯಕ್ಷರಾದ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ಬಸವರಾಜ ಸ್ವಾಮಿ ಮಳೀಮಠ ಇತರರು ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಸರ್ಕಾರಿ ಕಚೇರಿಯಲ್ಲೂ ಗಣೇಶ: ನಗರದ ಜೆಸ್ಕಾಂ, ನಗರಸಭೆ, ತಾಪಂ, ಕೆಕೆಆರ್‌ಟಿಸಿ ಸೇರಿ ಪ್ರಮುಖ ಕಚೇರಿಗಳಲ್ಲೂ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ನಗರಸಭೆಯಲ್ಲಿ ಅಮೃತ ಶಿಲೆಯ ಶಾಶ್ವತ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ವಿಸರ್ಜನೆ ಗಣೇಶನಿಗೂ ಪೂಜೆ ಸಲ್ಲಿಸಲಾಗಿದೆ. ಶಾಶ್ವತ ಮೂರ್ತಿ ಪ್ರತಿಷ್ಠಾಪನೆಗೆ ನಗರಾಡಳಿತ ಮಂಡಳಿಯಲ್ಲಿ ಪರ, ವಿರೋಧ ಚರ್ಚೆ ಶುರುವಾಗಿದ್ದು, ಸಿಬ್ಬಂದಿ ಗೊಂದಲಕ್ಕೊಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net